ಸಂಶೋಧನೆಯ ಕಾಮಧೇನು
ಕನ್ನಡದ ನೆಲದಿಂದ ಉದಿಸಿದ ಅಪರೂಪದ ವಿದ್ವದ್ಮಣಿ “ಶ್ರೀಲಕ್ಷ್ಮಿತಾತಾಚಾರ್ಯ”. ಇವರು ಮೇಲುಕೋಟೆಯ ಚರಿತ್ರೆಯಲ್ಲಿ ಅಚ್ಚಳಿಯದ ಹೆಸರು. ತರ್ಕ, ವಿಶಿಷ್ಟಾದ್ವೈತ, ದಿವ್ಯಪ್ರಬಂಧ, ಅಲಂಕಾರಗಳಲ್ಲಿ ಅನುಪಮವಾದ ಪಾಂಡಿತ್ಯ ಇವರಿಗಿತ್ತು. ಇವರು ಚತುರ ವಕ್ತಾರ. ಕನ್ನಡ, ಇಂಗ್ಲಿಷ್, ಸಂಸ್ಕೃತ ಮತ್ತು ಹಿಂದಿಗಳಲ್ಲಿ ಪ್ರಭಾವಿಯಾಗಿ ಪ್ರವಚನ ಮಾಡುವ ವಾಗ್ಮಿ. ತಮಿಳು ಮಾತೃಭಾಷೆ. ಸಂಸ್ಕೃತ ಆತ್ಮಭಾಷೆ. ಕನ್ನಡ ಮಿತ್ರಭಾಷೆ. ಇಂಗ್ಲಿಷ್ ವ್ಯವಹಾರ ಭಾಷೆ. ಎಲ್ಲದರಲ್ಲೂ ತಡವರಿಸದೆ ದೀರ್ಘಕಾಲ ಮಾತಾಡಬಲ್ಲ ವಕ್ತೃತ್ವ ಇವರದು. ಸಂಸ್ಕೃತ-ಸಂಶೋಧನ-ಸಂಸತ್ತನ್ನು ಕಟ್ಟಿ ನಿಲ್ಲಿಸಿದ ಸಂಸ್ಕೃತದ ಕಟ್ಟಾಳು. ಆಚಾರ್ಯ ರಾಮಾನುಜರ ಉಪದೇಶಸುಧೆಯನ್ನು ವಿಶ್ವದ ವಿದಾಂಸರ ಮನ-ಮನೆಗಳಿಗೆ ತಲುಪಿಸಿದ ವೇದಾಂತಕಿಂಕರ. ಶಿಸ್ತು-ಕ್ರಮಗಳಿಗೆ ಕಟ್ಟುಬಿದ್ದವರು. ಅಡೆತಡೆಗಳಿಗೆ ತಲೆಬಾಗದೆ ಹೊತ್ತ ಹೊರೆಯನ್ನು ಗುತ್ತಿಗೆ ಒಯ್ದ ತ್ರಿವಿಕ್ರಮ. ಇವರ ಸಾರಸ್ವತ ಸೇವೆ ತಪಸ್ಸಾಯಿತು; ಶಾಸ್ತ್ರಕೈಂಕರ್ಯ “ಸಂಸ್ಥೆ” ಆಯಿತು, ಮಾರ್ಗಶಿಲ್ಪ ವಿದ್ವಾಂಸರ ಸುವರ್ಣಪಥವಾಯಿತು.
ತಾತಾಚಾರ್ಯರು ಪ್ರಭಾವಿ ಬೋಧಕರು, ಸಮರ್ಥ ಸಾಧಕರು, ಸೂಕ್ಷ್ಮಸಂಶೋಧಕರು.
ಎತ್ತರವಾದ ಮೈಮಾಟ, ಉದ್ದನೆಯ ಕೈಕಾಲುಗಳು, ಕೆಂಪು ಹರಡುವ ಬಿಳಿಯ ಬಣ್ಣ, ಕೋಲು ಮುಖ, ಮೊನಚು ಕಣ್ಣುಗಳು, ಎದ್ದು ಕಾಣುವ ಮೂಗು, ಹಣೆಯಲ್ಲಿ ಮಿಂಚುವ ಹಸಿಹಸಿ ತೆಂಗಲೆ ನಾಮ, ಗಂಭೀರವಾದ ಗಾಂಧಾರಸ್ವರ. ಮಾತಾಡಲು ಯಾರೂ ಸಿಗದಿದ್ದರೆ ಬಾಯಲ್ಲಿ ಮೊರೆಯುವ ಸ್ತೋತ್ರಪಾಠ. ಇಲ್ಲದಿದ್ದರೆ ಆಯಾ ಕಾಲಕ್ಕೆ ಒಪ್ಪಿದ ರಾಗದ ಆಲಾಪ. ಪಾದದ ತುದಿಯವರೆಗೆ ಇಳಿಬಿದ್ದ ಪತ್ತಾರು ಬಿಳಿ ಪಂಚೆಯ ಟೆಂಪಲ್ ಬಾರ್ಡರಿನ ಗರಿಮುರಿ ಅಂಚು. ಮೈಮುಚ್ಚಿ ಹೊದೆಯುವ ಉತ್ತರೀಯ. ಅದರ ಮೇಲೆ ಆವರಿಸಿ ಹೊದೆಸಿದ ಜರಿತಾರಿ ಶಾಲು. ಅಂದಂದಿನ ಹುರುಪಿಗೆ ಅನುಗುಣವಾಗಿ ಕೆಂಪು, ಕೇಸರಿ, ಹಸಿರು, ಕಾಫಿಪುಡಿ ಬಣ್ಣದ ಶಾಲುಗಳ ತೂಗು. ಹೊರಬಾಗಿಲು ತೆರೆದು ಮನೆಯ ಮುಂದಿನ ಮೆಟ್ಟಿಲಿನಲ್ಲಿಯೇ ನಿಂತು ದೇವಾಲಯದ ಗೋಪುರಕ್ಕೆ ಕೈಮುಗಿದು ವಂದಿಸಿ ನಿಧಾನವಾಗಿ ನಾಲ್ಕೈದು ಮೆಟ್ಟಿಲುಗಳನ್ನು ಇಳಿಯುವ ಶೈಲಿ. ಮನೆಗೆ ನಮಿಸಿ, ಎಡಬಲ ನೋಡಿ ಹೊರಡುವ ಜೋಶ್. ಬೀದಿಯಲ್ಲಿ ಕಂಡು ವಂದಿಸುವ ಹಿರಿಕಿರಿಯರನ್ನು ಗಮನಿಸಿ, ಅಭಿವಂದಿಸುತ್ತ, ತೊನೆಯುತ್ತ ದೇವಸ್ಥಾನದ ಏರುದಾರಿಯಲ್ಲಿ ಸಾಗುತ್ತಿದ್ದರೆ, ಇಂದ್ರನ ಐರಾವತದ ಗಾಂಭೀರ್ಯ! ವಿಪ್ರವರ್ಚಸ್ಸಿಗೆ ಸಂದ ರಾಜಠೀವಿ. ರಾಜಬೀದಿಯ ವರ್ಚಸ್ಸು ತಾತಾಚಾರ್ಯರಿಂದ ವರ್ಧಿಸಿತ್ತು.
ತಾತಾಚಾರ್ಯರದು ಒಂದು ಅಪೂರ್ವವಾದ ಸಂಶೋಧಕಮನಸ್ಸು. ಎಲ್ಲರೂ ನೋಡಿರಬಹುದಾದ ವಸ್ತುವಿನಲ್ಲಿ ಹೊಸತನ್ನು ಕಾಣುವ ಪ್ರತಿಭೆ ಅವರಲ್ಲಿ ಇತ್ತು. ಹಳೆಯ ವಸ್ತುಗಳನ್ನಾದರೂ ಹೊಸ ವಿಧಾನದಲ್ಲಿ ಜೋಡಿಸುವ ಕೌಶಲ್ಯ ಅವರಿಗೆ ಒಲಿದಿತ್ತು. ಪಾಕವಿರಲಿ, ಪಾಠವಾಗಲಿ, ಹೊಸರುಚಿ ಅಥವಾ ಹೊಸ ವಿನ್ಯಾಸ ಅವರ ಸ್ವಭಾವವಾಗಿತ್ತು. ತಾತಾಚಾರ್ಯರ ವ್ಯುತ್ಪತ್ತಿಕ್ರಮದಲ್ಲಿಯೇ ನವಾನ್ವೇಷಣ ಮತ್ತು ನವೋಲ್ಲೇಖಗಳು ಸೇರಿಕೊಂಡಿದ್ದವು. ನೋಡುವಾಗ, ನುಡಿಯುವಾಗ, ಪಡೆಯುವಾಗ, ಕಡೆಯುವಾಗ ಹೊಸತನ್ನು ಗಮನಿಸುವ ಇವರ ಕಣ್ಗಾಪಿಗೆ ಬೆರಗಾಗದವರು ಯಾರು? ಆದುದರಿಂದ ಸಂಸ್ಕೃತ ಕಾವ್ಯಗಳಲ್ಲಿ, ಕಾವ್ಯಮೀಮಾಂಸೆಯಲ್ಲಿ, ವೇದಾಂತಗ್ರಂಥಗಳಲ್ಲಿ, ಪ್ರಮೇಯಭಾಗಗಳಲ್ಲಿ ನೂರಾರು ವಿದ್ವಾಂಸರನ್ನು ಸಂಶೋಧನೆಗೆ ತೊಡಗಿಸಿದರು. ಸಂಶೋಧನೆಯ ನೂರಾರು ಕ್ಷೇತ್ರಗಳನ್ನು ತೆರೆದು ಕಾಣಿಸಿದರು.
೧೯೮೪-೮೫ನೇ ಸಾಲಿನಲ್ಲಿ ಬೆಂಗಳೂರಿನ ಶ್ರೀಶಂಕರಮಠದಲ್ಲಿ ಸಂಸ್ಕೃತ ಪಂಡಿತರನ್ನೂ, ವಿಜ್ಞಾನಿಗಳನ್ನೂ ಒಂದೇ ವೇದಿಕೆಯಲ್ಲಿ ಸೇರಿಸಲಾಯಿತು. ಪರಮಪೂಜ್ಯ ಶ್ರೀ ಶ್ರೀ ಪರಮಾನಂದಭಾರತೀ ಸ್ವಾಮಿಗಳು ಆ ವೇದಿಕೆಯ ರೂವಾರಿಗಳಾಗಿದ್ದರು. ಡಾ.ವಿನೀತ್ ಚೈತನ್ಯ ವಿಜ್ಞಾನಿಗಳ ನೇತಾರರಾಗಿದ್ದರು. ಮಹಾಮಹೋಪಾಧ್ಯಾಯ ಶ್ರೀರಂಗನಾಥಶರ್ಮಾರವರು ಶಾಸ್ತ್ರವಿದ್ವಾಂಸರ ಮುಂದಾಳಾಗಿದ್ದರು. ೩ ದಿವಸಗಳ ಚರ್ಚೆ-ಚಿಂತನ-ಮಂಥನಗಳು ನಡೆದವು. ವಿಷಯ - ವಿಷಯಪ್ರತ್ಯಕ್ಷಂ. ಮೂರೂ ದಿನಗಳ ಸಮಯ ತಾತಾಚಾರ್ಯರು ಪ್ರೇಕ್ಷಕರಾಗಿ, ಶ್ರೋತೃಗಳಾಗಿ ಹಾಜರಿದ್ದರು. ಆದರೆ ಆಗಲೇ ಅವರೊಳಗಿದ್ದ ಸಂಶೋಧಕ ಜಾಗೃತನಾದ. ವಿಜ್ಞಾನಿಗಳಿಗೆ ಶಾಸ್ತ್ರಗಳು ಏನನ್ನು ತಿಳಿಸಬೇಕು ಎಂಬ ಜಿಜ್ಞಾಸೆ ಬಲಗೊಳ್ಳತೊಡಗಿತು. ವಿಜ್ಞಾನದಿಂದ ಶಾಸ್ತ್ರಗಳಿಗೆ ಯಾವ ಉಪಯೋಗ ದೊರೆಯಬೇಕು ಎಂಬ ನಿಲುವು ಸ್ಪಷ್ಟವಾಗತೊಡಗಿತು. ತಾತಾಚಾರ್ಯರು ಧೈರ್ಯಮಾಡಿ ಕಂಪ್ಯೂಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮುಂತಾದ ಕ್ಷೇತ್ರಗಳಲ್ಲಿ ಧುಮುಕಿದರು. ಮುಂದಿನ ೧೦ ವರ್ಷಗಳಲ್ಲಿ ಸಂಸ್ಕೃತ ಸಂಶೋಧನ ಸಂಸತ್ತಿನ ಕಾರ್ಯಕಲಾಪಗಳು ತೀವ್ರವಾದ ತಿರುವನ್ನು ಪಡೆದವು. ಒಂದಾದ ಮೇಲೊಂದಂತೆ ಸಂಶೋಧನಾ ಕಾರ್ಯವಿಭಾಗಗಳು, ಯೋಜನೆಗಳು ತೆರೆದುಕೊಂಡವು. ಸಂಸತ್ತಿನ ಕೀರ್ತಿ ವಿಶ್ವಾದ್ಯಂತ ಹರಡಿತು. ಜಗತ್ತಿನ ಖ್ಯಾತ ವಿಜ್ಞಾನಿಗಳೂ, ವಿದ್ವಾಂಸರೂ ಮೇಲುಕೋಟೆಯ ಕಡೆ ಮುಖವಾದರು, ಮುಖಮಾಡಿದರು.
ಅಲ್ಲಿಯವರೆಗೆ ನಡೆದ ಸಂಶೋಧನೆಗಳೂ ಕಡಿಮೆಯೇನಲ್ಲ. ಸಂಸ್ಕೃತ ಸಂಶೋಧನ ಸಂಸತ್ ತಾತಾಚಾರ್ಯರ ಕಲ್ಪನೆಯ ಕೂಸು. ಅವರ ಕ್ರಿಯಾಶಕ್ತಿಯ ಸಮರ್ಥಶಿಲ್ಪ. ಸಂಶೋಧಕ ಪ್ರತಿಭೆಯ ಸಾರಸ್ವತವಿಲಾಸ. ಸಂಸ್ಥೆಯ ಸ್ಥಾಪಕರೂ ಇವರೇ. ಬೀಜಾವಾಪದಿಂದ ತೊಡಗಿ ಮರವಾಗಿ ಬೆಳೆಸುವವರೆಗೆ ಏಕಾಂಗಿಯಾಗಿ ಹೋರಾಡಿದರು. ಆಡಳಿತ, ಕಟ್ಟಡ, ವಿದ್ವಾಂಸರ ನಿಯುಕ್ತಿ, ನಿಗಮಗಳ ಕಾರ್ಯವಿಧಾನ, ಅದರ ಫಲಾಫಲಗಳು, ಕಛೇರಿಯ ನಿರ್ವಹಣೆ, ಕೈತೋಟದ ಬೆಳವಣಿಗೆ.. ಒಂದೇ.. ಎರಡೇ.. ಸಾವಿರ ಕೆಲಸಗಳು. ಅಹೋರಾತ್ರ ಶ್ರಮಿಸಿದರು. ಮಡದಿ-ಮಕ್ಕಳ ಪರಿವೆಯಿಲ್ಲ, ಪರಿವಾರದ ಗೊಡವೆಯಿಲ್ಲ. ಅವುಗಳನ್ನು ಉಪೇಕ್ಷಿಸಲೂ ಇಲ್ಲ. ಸಂಸತ್ ಇವರ ಸರ್ವಶ್ರಮವನ್ನೂ ಸೆಳೆದುಕೊಂಡ ’ಆಶ್ರಮ’ವೇ ಆಗಿತ್ತು. ವಿಘ್ನಗಳಿಗೆ ಅಂಜಲಿಲ್ಲ. ವಿರೋಧಿಗಳಿಗೆ ಬಗ್ಗಲಿಲ್ಲ. ತನ್ನ ಸಂಕಲ್ಪವನ್ನು ಬಿಡಲಿಲ್ಲ. ಅದನ್ನು ನಾರಾಯಣಪ್ರೇರಣೆ ಎಂದು ಗ್ರಹಿಸಿ ತ್ರಿವಿಕ್ರಮ ಪರಾಕ್ರಮವನ್ನು ಮೆರೆಸಿದರು.
ಕಟ್ಟಡದ ಒಳಗೆ ಸಂಶೋಧನೆಯ ಕಾರ್ಯಗಳು ಭರದಿಂದ ಸಾಗಿದಂತೆ, ಕಟ್ಟಡದ ಸುತ್ತ ಮುತ್ತ ತೋಟಗಳು ನಳನಳಿಸ ತೊಡಗಿದವು. ಸಾವಿರಾರು ರೀತಿಯ ತರು, ಲತೆ, ಗಿಡ-ಗಂಟಿಗಳನ್ನು ಬೆಳೆಸಿದರು. ಬಂಡೆಗಳು, ಬಂಜರು ಭೂಮಿ ಹಸಿರುಟ್ಟ ನಂದನವಾಯಿತು. ಸಂಸತ್ತಿನಿಂದ ದೇವರ ಪೂಜೆಗಾಗಿ ನೂರಾರು ತರಹದ ಹೂಗಳ ಬುಟ್ಟಿಗಳನ್ನು ಅರ್ಪಿಸಲಾಗುತ್ತಿತ್ತು. ಕೊಳಗಳು ಮೊದಲಿನಂತೆ ನಿರ್ಮಲಜಲಾಕರಗಳಾದವು. ತಂದು ಹಾಕಿದ ಮೀನುಗಳ ಸಂತತಿ ಹೆಚ್ಚಿತು. ಗೋಶಾಲೆ ತೆರೆಯಿತು. ನೂರಾರು ದೇಶೀತಳಿಯ ಆಕಳುಗಳು ತುಂಬಿಕೊಂಡವು. ತಾತಾಚಾರ್ಯರ ಪ್ರಾಣಿ ಪ್ರೇಮಕ್ಕೆ ಕೊನೆಯಿರಲಿಲ್ಲ. ಕುದುರೆಗಳನ್ನು ಕಟ್ಟಿದರು. ನವಿಲುಗಳನ್ನು ಸಾಕಿದರು. ರಾಜಹಂಸಗಳನ್ನು ಪೋಷಿಸಿದರು.
ಸಂಶೋಧನೆಗೆ ಪರಿಕರಗಳು ಬೇಕು. ಪುಸ್ತಕಗಳು ಬೇಕು. ಓದುವ-ಓದಿಸುವ ಆನುಕೂಲ್ಯಗಳು ಇರಬೇಕು. ಎಲ್ಲವನ್ನೂ ಸಾಧಿಸಲಾಯಿತು. ತಾಳಪತ್ರ-ಸಂಗ್ರಹ, ಮುದ್ರಿತ ಪುಸ್ತಕಗಳ ಸಂಗ್ರಹ, ಹಸ್ತಪ್ರತಿಗಳ ಸಂಗ್ರಹ ... ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಚ್ಯವಸ್ತುಗಳ ಸಂಗ್ರಹಗಳನ್ನು ಒಪ್ಪಓರಣಗಳನ್ನು ಮಾಡಲಾಯಿತು. ೧೯೮೦ರ ದಶಕದ ಹತ್ತು ವರ್ಷಗಳ ಕಾರ್ಯವಿಧಾನ ಸಂಸತ್ತಿಗೆ ಒಂದು ಶತಮಾನದ ಸಾಧನೆಗಳನ್ನು ತಂದುಕೊಟ್ಟಿತು. ಈ ಎಲ್ಲ ಪ್ರಯತ್ನಗಳಲ್ಲಿ ತಾತಾಚಾರ್ಯರದೇ ಸಿಂಹಪಾಲು. ಅವರ ಪಾಂಡಿತ್ಯ, ಪ್ರತಿಭೆ, ಪರಿಣತಿ, ಪರಿಶ್ರಮಗಳು ಒದಗದೇ ಇರುತ್ತಿದ್ದರೆ ಈ ಸಂಸ್ಥೆಯ ಇಂದಿನ ಚಿತ್ರವೇ ಇರುತ್ತಿರಲಿಲ್ಲ. ಅರ್ಹತೆಯಿಂದ ತಾತಾಚಾರ್ಯರೇ ಒಂದು ಸಂಸ್ಥೆ. ಇವರಿಗೆ ಸಂಸ್ಥೆ ಒಂದು ಉಪಕರಣ ಮಾತ್ರ. ಕಲ್ಪನೆಯನ್ನು ಕ್ರಿಯೆಯಾಗಿ ವಿಸ್ತರಿಸುವ ಅವರ ಕರ್ತೃತ್ವಕ್ಕೆ ಸರಿದೊರೆ ಯಾರೂ ಇಲ್ಲ. ಆದುದರಿಂದ ಸರಿದೊರೆ ಇವರೇ.
ಅಂದು ಭಗವದ್ರಾಮಾನುಜಾಚಾರ್ಯರ ನವಗ್ರಂಥಗಳ ವಿಮರ್ಶಾತ್ಮಕ ಸಂಪಾದನ ಮತ್ತು ಹತ್ತು ಭಾಗಗಳಲ್ಲಿ ವಿಶಿಷ್ಟಾದ್ವೈತಕೋಶರಚನ ಸಂಸತ್ತಿನ ಪ್ರಧಾನ ಕಾರ್ಯಗಳಾಗಿದ್ದವು. ಆಮೇಲೆ ಉಪನಿಷದ್ಭಾಷ್ಯ ಮತ್ತು ಗ್ರಂಥಸೂಚೀ ನಿಗಮಗಳು ಪ್ರಾರಂಭಗೊಂಡವು. ಸುಮಾರು ಹದಿನೈದು ಹದಿನಾರು ವಿದ್ವಾಂಸರು ಸಂಶೋಧನೆಯ ಕಾರ್ಯದಲ್ಲಿ ತೊಡಗಿದರು. ಪಂಡಿತಪ್ರಕಾಂಡ ಶ್ರೀ.ಎಸ್.ಎಂ.ಎಸ್.ವರದಾಚಾರ್ಯರು ವಿಶಿಷ್ಟಾದ್ವೈತಕೋಶನಿಗಮದ ಅಧ್ಯಕ್ಷರೂ ಸಂಪಾದಕರೂ ಆಗಿ ಮುನ್ನಡೆಸುತ್ತಿದ್ದರು. ಮಹಾಮಹೋಪಾಧ್ಯಾಯ ಶ್ರೀ.ಎನ್.ಎಸ್.ರಾಮಭದ್ರಾಚಾರ್ಯರು ಶ್ರೀಭಾಷ್ಯನಿಗಮದ ಅಧ್ಯಕ್ಷರೂ ಸಂಪಾದಕರೂ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ವಿದ್ವಾಂಸರಾದ ಎಂ.ಬಿ.ಪಾರ್ಥಸಾರಥಿ ಅಯ್ಯಂಗಾರ್, ಕೆ.ಶ್ರೀನಿವಾಸ ಐಯ್ಯಂಗಾರ್, ಎಸ್.ಎಂ.ವೀರರಾಘವಾಚಾರ್ಯ ಮೊದಲಾದವರು ಸಹಕಾರಿಗಳಾಗಿದ್ದರು. ವಾರಕ್ಕೊಮ್ಮೆ ಸಭೆ ಸೇರುತ್ತಿದ್ದರು. ಎಲ್ಲ ವಿದ್ವಾಂಸರನ್ನು ಅವರವರ ಅರ್ಹತೆ, ವಯಸ್ಸು, ಕ್ರಿಯಾಶಕ್ತಿಗಳಿಗೆ ಅನುಗುಣವಾಗಿ ಪ್ರೇರಿಸುತ್ತಿದ್ದ ಪರಿ ಆಶ್ಚರ್ಯಕರ. ಶ್ರೀಭಾಷ್ಯಗ್ರಂಥದ ನಾಲ್ಕು ಭಾಗಗಳು ಮತ್ತು ವಿಶಿಷ್ಟಾದ್ವೈತಕೋಶದ ಮೊದಲ ಭಾಗಗಳನ್ನು ಗಮನಿಸಿದರೆ ವಿಮರ್ಶಾತ್ಮಕ ಗ್ರಂಥ ಸಂಪಾದನೆ ಮತ್ತು ಪ್ರಮೇಯಭಾಗದ ಪರಿಶೋಧನೆ ಹೇಗೆ ಮಾದರಿಯ ಸ್ವರೂಪವನ್ನು ಪಡೆದಿತ್ತು ಎಂಬ ಸಂಗತಿ ವೇದ್ಯವಾಗುತ್ತದೆ.
ಸಂಶೋಧನಾ ಕಾರ್ಯಗಳ ಮೊತ್ತ ಮತ್ತು ಸತ್ತ್ವಗಳನ್ನು ಪರಿಗಣಿಸದರೆ ಲಕ್ಷ್ಮೀತಾರಾಚಾರ್ಯರು ಪ್ರೊ.ವಿ.ರಾಘವನ್, ಪ್ರೊ.ಎಸ್.ಕೆ.ರಾಮಚಂದ್ರರಾವ್, ಶ್ರೀವಾಸುದೇವಶಾಸ್ತ್ರಿ ಅಭಯಂಕರ್, ಡಾ.ಕಪಿಲಾವಾತ್ಸ್ಯಾಯನ್ ಮೊದಲಾದ ಹಿರಿಯ ಪ್ರಗಲ್ಭಪಂಡಿತರ ಸಾಲಿಗೆ ಸೇರತಕ್ಕವರು ಎಂಬುದು ವಿವಾದಾತೀತ ವಿಷಯ.