ಸವಿಯಾದ ಅನುಭವಗಳು

ನನ್ನ ತೀರ್ಥರೂಪು ಅಣ್ಣನವರ ವಿಷಯವಾಗಿ ಬರೆಯಬೇಕೆಂದು ವಿನಂತಿಸಿದಾಗ ನನಗೆ ಬಹಳ ಸಂತೋಷವಾಯಿತು. ಅವರ ಜೊತೆ ಕಳೆದ ಕ್ಷಣಗಳು ಮತ್ತು ಕೆಲವು ಅನುಭವಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

"ಭ್ರಾತೃ ದೇವೋಭವ", ಹೌದು, ಅವರು ನಮ್ಮೆಲ್ಲರ ಪೂಜ್ಯ ಅಣ್ಣನಾಗಿದ್ದರು. ಆ ಅಣ್ಣನಲ್ಲಿ ನಾನು ಕಂಡಿದ್ದು ನನ್ನತಂದೆಯತನ ಅವರು ಪ್ರೀತಿ, ವಾತ್ಸಲ್ಯದ ಖನಿಯಾಗಿದ್ದರು. ಅವರು ಒಬ್ಬ ಶ್ರಮಜೀವಿ; ಒಂದುತುಂಬಿದ ಕೊಡಮತ್ತು ದಯಾಳು, ಅವರ ವಿಷಯದಲ್ಲಿ ಬರೆಯಲು ಪದಗಳೇಸಿಗುವುದಿಲ್ಲ.

ನನಗೆ ಚಿಕ್ಕಂದಿನಿಂದಲೂ ಮೈಸೂರಿನ ದಸರಾ ಕಾರ್ಯಕ್ರಮಗಳನ್ನು, ಹಾಗೆಯೇ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕೆಂದು ಬಹಳ ಆಸೆ. ಒಂದು ಸಲ ನಾನು ನನ್ನ ತಂಗಿಯರೊಡನೆ ಹೋಗಬೇಕೆ೦ದು ಯೋಚನೆ ಮಾಡಿ ನಮ್ಮ ತಾಯಿಯೊಡನೆ ಕೇಳಿದೆವು. ಆದರೆ ಅವರ ಹತ್ತಿರ ನಮಗೆ ಬಸ್ ಭಾರ್ಜಿಗೆ ಕೊಡುವಷ್ಟೂ ಹಣ ಇರಲಿಲ್ಲ. ಆದರೆ ನಾವುಗಳು ಹೋಗಲೇಬೇಕೆಂದು ಹಠ ಮಾಡಿದೆವು. ಅವರು ಹೇಗೋ ಮಾಡಿ ಬಸ್ಸಿಗೆ ಹಣ ಹೊಂದಿಸಿ ಕೊಟ್ಟರು. ನಾವು ಮೈಸೂರಿಗೆ ಹೋಗಿ ನಮ್ಮ ಅಜ್ಜಿಯ ಮನೆಯಲ್ಲಿ ಉಳಿದುಕೊಂಡೆವು. ನಮಗೋ ಚಾಮುಂಡಿ ಬೆಟ್ಟ, ಮೈಸೂರಿನ ಅರಮನೆ, ಕೆ ಆರ್ ಎಸ್, ಎಗ್ಸಿಬಿಷನ್ ಎಲ್ಲವನ್ನೂ ನೋಡಬೇಕೆಂದು ಬಹಳ ಆಸೆ. ಆದರೆ ಯಾರನ್ನು ಕೇಳುವುದೆಂದು ಯೋಚಿಸುತ್ತಿದ್ದೆವು. ನಮ್ಮ ಅಣ್ಣನವರು ಆಗ ಮೈಸೂರಿನಲ್ಲಿ ಕಾಲೇಜು ಓದುತ್ತಿದ್ದರು. ಅವರಿಗೆ ನಾವು ಮೈಸೂರಿಗೆ ಬಂದಿರುವ ವಿಷಯ ತಿಳಿದಿರಲಿಲ್ಲ. ದೇವರೇ ಕಳಿಸಿದಂತೆ ಅವರು ನಮ್ಮ ಅಜ್ಜಿಯ ಮನೆಗೆ ಬಂದರು. ನಮಗಂತೂ ಅವರನ್ನು ನೋಡಿ ಬಹಳ ಸಂತೋಷ ನಾವುಗಳು ನಮ್ಮ ಆಸೆಯನ್ನು ಅವರ ಹತ್ತಿರ ಹೇಳಿದೆವು. ಅವರು ಕೂಡಲೇ "ನೀವು ಏನೂ ಯೋಚಿಸಬೇಡಿ. ನಾನು ನಿಮ್ಮನ್ನು ಎಲ್ಲ ಕಡೆಯೂ ಕರೆದುಕೊಂಡು ಹೋಗಿ ತೋರಿಸುತ್ತೇನೆ" ಎಂದರು.ನಮಗಂತೂ ಬಹಳ ಆನಂದ ಅದರಂತೆ ಅವರು 3 ದಿನ ಎಲ್ಲ ಕಡೆಯೂ ಸುತ್ತಿಸಿ ಎಲ್ಲವನ್ನೂ ತೋರಿಸಿದರು. ನಂತರ ನಾವು ಮೇಲುಕೋಟೆಗೆ ಹೊರೆಟೆವು. ಅವರ ಹತ್ತಿರವೂ ಆಗ ದುಡ್ಡಿರಲಿಲ್ಲ. ಆದರೂ ಹೇಗೋ ಮಾಡಿ ನಮಗೆ ಸಂತೋಷಪಡಿಸಿದರು. ಆ ದಿನಗಳನ್ನು ಮರೆಯುವಂತೆಯೇ ಇಲ್ಲ. ಕೆಲವು ದಿನಗಳ ನಂತರ ಅವರು ಸಾಲವನ್ನು ತೆಗೆದುಕೊಂಡು ನಮ್ಮನ್ನು ಸುತ್ತಿಸಿ ಸಂತೋಷಪಡಿಸಿದರೆಂದು ನಮಗೆ ಗೊತ್ತಾಗಿ ಮನಸ್ಸಿಗೆ ಸ್ವಲ್ಪಬೇಸರವಾಯಿತು.

ಮತ್ತೊಂದು ಸಂದರ್ಭ. ನಾನೂ ನನ್ನ ಅತ್ತಿಗೆಯೂ ಪ್ರೈಮರಿ ಸ್ಕೂಲಿನಿಂದ ಜೊತೆಯಾಗಿ ಹೈಸ್ಕೂಲಿನ ತನಕ ಒಟ್ಟಿಗೆ ಓದುತ್ತಿದ್ದವು. ಅವಳು ನನ್ನ ಪ್ರಾಣ ಸ್ನೇಹಿತೆ. ಅದಕ್ಕಾಗಿ ನನ್ನ ಮೇಲೆ ನನ್ನ ಅಣ್ಣನವರಿಗೆ ವಿಶೇಷವಾದ ಅಭಿಮಾನ. ಆಗಿನ ಕಾಲದಲ್ಲಿ ಮೇಲುಕೋಟೆಯಲ್ಲಿ SSLC ಪರೀಕ್ಷೆಗೆ centre ಇರಲಿಲ್ಲ. ಹಾಗಾಗಿ ಪರೀಕ್ಷೆ ಬರೆಯಬೇಕೆಂದರೆ ಪಾಂಡವಪುರಕ್ಕೆ ಹೋಗಬೇಕಿತ್ತು. ಅದೂ ಅಲ್ಲದೆ ಬೆಳಿಗ್ಗೆ 7 ಘಂಟೆಗೆ ಮೇಲುಕೋಟೆಯಿಂದ ಪಾಂಡವಪುರಕ್ಕೆ ಒಂದೇ ಒಂದು ಬಸ್ಸು ಹೋಗುತ್ತಿತ್ತು. ಬಸ್ಸು ಹೊರಟು ಹೋದರೆ ಪರೀಕ್ಷೆಗೆ ಹೋಗಲಾಗುತ್ತಿರಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ನನ್ನ ಅಣ್ಣನವರಿಗೆ ಬಹಳ ಬೇಸರವಾಯಿತು. ಅವರು ನನಗೆ "ನೀನು ಬೆಂಗಳೂರಿಗೆ ಹೋಗಿ ಪರೀಕ್ಷೆ ಬರಿ. ನಾನು ಅಲ್ಲಿಗೆ centre ಹಾಕಿಸಿ ಕೊಡುತ್ತೇನೆ" ಎಂದರು. ನನಗೋ ಭಯ ಯಾಕೆಂದರೆ ಬೆಂಗಳೂರು ನನಗೆ ಹೊಸದು. ನನಗೆ ಆಗ ಕೇವಲ 16 ವರ್ಷ. ಹೇಗೋ ಏನೋ ಎಂದು ಚಿಂತೆ ಮಾಡುತ್ತಿದ್ದೆ. ಅವರು ಹೇಳಿದಂತೆಯೇ centre change ಮಾಡಿಸಿದರು. ನಾನು ಮೇಲುಕೋಟೆಯಲ್ಲಿಯೇ ಕಷ್ಟಪಟ್ಟು ಓದಿ ಬೆಂಗಳೂರಿಗೆ ಹೋಗಿ ನನ್ನ ಅಕ್ಕನ ಮನೆಯಲ್ಲಿ ಇದ್ದು ಪರೀಕ್ಷೆ ಬರೆದು pass ಮಾಡಿದೆ. ಅಣ್ಣನವರಿಗೆ ಬಹಳ ಸಂತೋಷವಾಯಿತು.

ನನ್ನ ಅಣ್ಣನವರು ಬೆಂಗಳೂರಿನ central college ನಲ್ಲಿ ಪ್ರಾಧ್ಯಾಪಕರಾಗಿದ್ದರು. ನನಗೆ ಮುಂದೆ college ಗೆ ಸೇರಿ ಓದಬೇಕೆಂದು ಬಹಳ ಆಸೆ ಇದ್ದಿತು. ಆದರೆ ಆಕಾಲದಲ್ಲಿ ನಮ್ಮ ತಂದೆಯವರಿಗೆ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸಿ ಓದಿಸಲು ಇಷ್ಟವಿರಲಿಲ್ಲ. ನಾನು ನನ್ನ ಆಸೆಯನ್ನು ನನ್ನ ಅಣ್ಣನವರಿಗೆ ತಿಳಿಸಿದೆ. ಅವರು ನನ್ನ ತಂದೆಯವರನ್ನು ಹೇಗೋ ಒಪ್ಪಿಸಿದರು. ಆದರೆ ಅಣ್ಣನವರು ನನಗೆ ಒಂದು condition ಹಾಕಿದರು. ಏನೆಂದರೆ ಅಕಸ್ಮಾತ್ ನಿನಗೆ ಮದುವೆ ನಿಶ್ಚಯವಾದರೆ ಕಾಲೇಜನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕೆಂದರು. ನನಗೆ ನಿರಾಸೆಯಾದರೂ ತೋರಿಸಿಕೊಳ್ಳದೆ "ಬೀಸೋ ದೊಣ್ಣೆ ತಪ್ಪಿದರೆ, ಸಾವಿರ ವರುಷ ಆಯಸ್ಸು" ಎಂಬಂತೆ ಒಪ್ಪಿಕೊಂಡೆ. ನಂತರ ಅಣ್ಣನವರು ನನ್ನ ಅಕ್ಕ ಭಾವನ ಜೊತೆಗೆ ಒಂದು ಮನೆ ಮಾಡಿ, ಅಲ್ಲಿಯೇ ಇರಿಸಿಕೊಂಡು ಓದಿಸಿದರು. ನಾನು college ಸೇರುವ ವೇಳೆಗೆ August ತಿಂಗಳು ಕಳೆದು ಹೋಗಿತ್ತು. ಎಲ್ಲ admission ಕೆಲಸಗಳೂ ಮುಗಿದು ಹೋಗಿತ್ತು. ನನ್ನ ಅಣ್ಣನವರೇ ಶತಪ್ರಯತ್ನ ಮಾಡಿ MES College ನಲ್ಲಿ seat ಕೊಡಿಸಿದರು. ನಾನು SSLC ವರೆಗೂ Kannada medium ನಲ್ಲಿ ಓದಿದ್ದರಿಂದ, PUCಯಲ್ಲಿ English medium adjust ಆಗಲು ಬಹಳ ಕಷ್ಟವಾಯಿತು. ಅಂತೂ ಹೇಗೋ ಕಷ್ಟಪಟ್ಟು ಓದಿ PUC pass ಮಾಡಿದೆ. ನನ್ನ ಅಣ್ಣನವರು ಬಹಳ ಸಂತೋಷಪಟ್ಟರು. ನಂತರ ಅವರು Sanskrit honours ಮಾಡುವಂತೆ ಹೇಳಿ degree class ಗೆ ಸೇರಿಸಿದರು. ಯಾಕೆಂದರೆ Sanskrit ಅವರ ಅಚ್ಚುಮೆಚ್ಚಿನ ಭಾಷೆ. ಅವರು ಹೇಳಿದಂತೆಯೇ 3 ವರ್ಷ Sanskrit honours ಗೆ ಸೇರಿ distinction ನಲ್ಲಿ pass ಮಾಡಿದೆ. ನನ್ನ ಅಣ್ಣನವರು ನಮ್ಮ ಕಾಲೇಜಿನಲ್ಲಿ ನಡೆದ ನನ್ನ convocation ಬಂದು ನನ್ನನ್ನು ಹರಸಿ ಸಂತೋಷಪಟ್ಟರು. ನನಗಂತೂ ಅಪರಿಮಿತ ಆನಂದವಾಯಿತು. ಯಾಕೆಂದರೆ ನಮ್ಮ ಮನೆಯ ಹೆಣ್ಣುಮಕ್ಕಳ ಪೈಕಿ ನಾನೇ

ಮೊದಲು ಪದವಿ ಪಡೆದ ಹುಡುಗಿಯಾಗಿದ್ದೆ ಆದರೆ ದುರದೃಷ್ಟವಶಾತ್ ನನ್ನ degree ಮುಗಿಯುವುದರೊಳಗೆ ನನ್ನ ತಂದೆಯವರು ದೈವಾಧೀನರಾದರು. ನಂತರ ನನ್ನ ಅಣ್ಣನವರೇ ನನಗೆ ಒಂದು ವರ್ಷದೊಳಗಾಗಿ ಮದುವೆಯನ್ನು ಮಾಡಿದರು. ಯಾಕೆಂದರೆ ತಂದೆಯವರು ದೈವಾಧೀನರಾದ 1 ವರ್ಷದೊಳಗೆ ಕನ್ಯಾದಾನ ಮಾಡಬೇಕೆಂದು ಶಾಸ್ತ್ರವಿದೆ. ಅವರ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ.

2020 ನೇ ಇಸವಿ ಡಿಸೆಂಬರ್ ನಲ್ಲಿ ನನ್ನ 70 ನೇ ಹುಟ್ಟಿದ ಹಬ್ಬದ ಸಂದರ್ಭ. ನನಗಂತೂ ಹುಟ್ಟಿದ ಹಬ್ಬವನ್ನು grand ಆಗಿ ಆಚರಿಸಲು ಇಷ್ಟವೇ ಇಲ್ಲ. ಆದರೂ ನನ್ನ ಅಕ್ಕ, ತಂಗಿಯರೆಲ್ಲರೂ ನಮ್ಮ ಮನೆಗೇ ಬಂದು ಹುಟ್ಟಿದ ಹಬ್ಬವನ್ನು ಆಚರಿಸಿ ಸಂತೋಷಪಟ್ಟರು.

ಅದಾದ 15 ದಿನಗಳ ನಂತರ ನನ್ನ ಅಣ್ಣನವರು ನನಗೆ phone ಮಾಡಿ "ನೀನು ನಿನ್ನಯಜಮಾನರ ಜೊತೆಗೆ ಇಲ್ಲಿಗೆ ಬಂದುಬಿಡು ನಿನ್ನ ಹುಟ್ಟಿದ ಹಬ್ಬವನ್ನು ಎಲ್ಲರೂ ಸೇರಿ ಇಲ್ಲಿಯೇ ಆಚರಿಸೋಣ" ಎಂದು ಆಮಂತ್ರಿಸಿದರು. ನನಗಂತೂ ಬಹಳ ಸಂತೋಷ, ಇನ್ನೊಂದು ವಿಷಯ ನನ್ನ ಅತ್ತಿಗೆಯ ಹುಟ್ಟುಹಬ್ಬವೂ ನನ್ನ ಹುಟ್ಟಿದ ದಿನದಂದೇ ಬರುತ್ತದೆ. ಆದರೆ ಇಸವಿಗಳು ಬೇರೆ. ನನ್ನ ಅಣ್ಣನವರು, ಎಲ್ಲ ಅಕ್ಕ ತಂಗಿಯರು ಮತ್ತು ತಮ್ಮಂದಿರಿಗೂ phone ಮಾಡಿ ವಿಷಯ ತಿಳಿಸಿದರು. ಎಲ್ಲರೂ ಆ ದಿನ ಅಲ್ಲಿಗೆ ಬಂದು ಸೇರಿದರು. ಮೈಸೂರಿನಿಂದ ನನ್ನ ದೊಡ್ಡ ಅಕ್ಕನವರೂ ಬಂದಿದ್ದರು. ನನ್ನ ಆನಂದಕ್ಕೆ ಪಾರವೇ ಇಲ್ಲ. ನನ್ನ ಅಣ್ಣನವರು ಹಬ್ಬದ ಅಡಿಗೆ ಮಾಡಿ ಎಲ್ಲರಿಗೂ ಅವರೇ ನಿಂತು ಪ್ರೀತಿಯಿಂದ ಬಡಿಸಿದರು. ಅಂದು ಅವರು ಮಾಡಿ ಬಡಿಸಿದ ಕ್ಷೀರಾನ್ನದ ಸವಿರುಚಿ ಇನ್ನೂ ನನ್ನ ನಾಲಿಗೆಯ ಮೇಲೆಯೇ ಇದೆ. ನನ್ನ ಯಜಮಾನರಿಗೆ "ನೀವು ಈ ದಿನ ಸ್ವಲ್ಪ sweet ತಿನ್ನಿ. ಪರವಾಗಿಲ್ಲ. ರಮಾ ಹೇಳಿದರೆ ಕೇಳಬೇಡಿ" ಎ೦ದು ಉಪಚರಿಸಿ ಬಡಿಸಿದರು. ಯಾಕೆಂದರೆ ನನ್ನ ಯಜಮಾನರಿಗೆ sugar problem ಇರುವದರಿಂದ ಹಾಗೆ ಹೇಳಿದರು. ನಂತರ ನಮ್ಮಿಬ್ಬರಿಗೂ ಶಾಲು ಹೊದಿಸಿ ಆಶೀರ್ವಾದ ಮಾಡಿದರು. ಆ ಸುಂದರ ಕ್ಷಣಗಳನ್ನು ಎಂದೂ ಮರೆಯಲಾಗುವುದಿಲ್ಲ. ನಂತರ ನಾವುಗಳೆಲ್ಲರೂ ಅವರ ಪ್ರೀತಿ ಪಾತ್ರವಾದ ತೋಟಕ್ಕೆ ಹೋಗಿ ಅವರು ಬೆಳೆದ, ನಮಗೆ ಬೇಕು ಬೇಕಾದ ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು taxi ಯಲ್ಲಿ ತುಂಬಿಸಿಕೊಂಡು ಬೆಂಗಳೂರಿಗೆ ಹೊರಟೆವು. ಅಣ್ಣನವರು ಎಲ್ಲರನ್ನೂ ಸೇರಿಸಿ ಸಂಭ್ರಮದಿಂದ ಆಚರಿಸಿದ ಆ ದಿನವೇ ಅವರೊಂದಿಗೆ ಕಡೆಯ ಸಮಾರಂಭವಾಯಿತು. ಅದೆಲ್ಲ ಈಗ ಒಂದು "ಸುವರ್ಣ ಯುಗ" ಎ೦ಬ೦ತೆ ಭಾಸವಾಗುತ್ತಿದೆ.

ಅವರು ಹಣದ ಆಮಿಷಕ್ಕೆ ಎಂದೂ ಒಳಗಾದವರಲ್ಲ. ಇರುವುದರಲ್ಲಿಯೇ ತೃಪ್ತಿಯ ಜೀವನ

ನಡೆಸುತ್ತಲಿದ್ದರು. ಸಂಗೀತವೆಂದರೆ ಬಹಳ ಇಷ್ಟ ಜೊತೆಗೆ ಕೊಳಲನ್ನೂ ನುಡಿಸುತ್ತಿದ್ದರು. ಅವರಿಗೆ ಅನ್ನದಾನವೇ ಶ್ರೇಷ್ಠ ದಾನ. ಯಾರು ಯಾವ ಸಮಯದಲ್ಲಿ ದೂರದೂರಿನಿಂದ ಬಂದರೂ, ನೂರಾರು ಜನ ಹಸಿದು ಬಂದವರಿಗೆ "ಅತಿಥಿ ದೇವೋಭವ" ಎನ್ನುವಂತೆ ಊಟೋಪಚಾರ ಮಾಡಿ ಸಂತೋಷಪಡುತ್ತಿದ್ದರು. ಅವರ "ವಿದ್ವತ್" ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. 'ಅಡಿಯೇನ್ ಪುಹರಾದ ಅಶ್ರಮುಮಿಲ್ಲೆ"ಎಂಬಂತೆ ಸಾಹಿತ್ಯ, ತರ್ಕ ಮೀಮಾಂಸ, ವ್ಯಾಕರಣ ಮತ್ತು ಕಂಪ್ಯೂಟರ್ ಕಲಿಕೆ ಎಲ್ಲವೂ ಅವರ ನರ ನಾಡಿಗಳಲ್ಲಿ ಹರಿಯುತ್ತಿತ್ತು. ಯಾವಾಗಲೂ ಹಸನ್ಮುಖಿ, ಇಂತಹ ಅಣ್ಣನ ತಂಗಿಯಾಗಿ ಜನಿಸಿರುವುದಕ್ಕೆ ನನಗೇ ಹೆಮ್ಮೆಯೆನಿಸುತ್ತಿದೆ. ಆದರೆ ಅವರನ್ನು ಕಳೆದುಕೊಂಡು ಅಷ್ಟೇ ದುಃಖ ತಪ್ತಳಾಗಿದ್ದೇನೆ. ಈಗಲೂ ಕನಸಿನಲ್ಲಿ ಶ್ರೀ ರಾಮಾನುಜಾಚಾರ್ಯರಂತೆ ನಾಮ ಹಾಕಿಕೊಂಡು ಬಂದು ನಗುತ್ತಾ ಮಾತನಾಡಿಸಿ ಅದೃಶ್ಯರಾಗುತ್ತಾರೆ.

ಇಂತಹ “ವಿದ್ವನ್ನಣಿ'ಯಾದ ನನ್ನ ಅಣ್ಣನವರನ್ನು ಕಳೆದುಕೊಂಡಾಗ ನಮ್ಮೆಲ್ಲರ ಸಂಸ್ಕೃತಿಯ ಒಂದು ಭವ್ಯ ಪರಂಪರೆಯನ್ನು ಕಳೆದುಕೊಂಡಂತಾಗಿದೆ. ಅವರಂತೆಯಾರೂ ಇಲ್ಲ ಮತ್ತು ಯಾರೂ ಇರಲೂ ಸಾಧ್ಯವಿಲ್ಲ.

"ನ ಭೂತೋ ನ ಭವಿಷ್ಯತಿ" - ಮುಂದಿನ ಜನ್ಮವೊಂದಿದ್ದರೆ, ನಾನು ಪುನಃ ಅವರ ತಂಗಿಯಾಗಿಯೇ ಹುಟ್ಟಿ ಬರಬೇಕೆಂದು ಹಾರೈಸುತ್ತಿರುವ...