ಮಹಾ ಮಹಿಮೋಪಾಧ್ಯಾಯ ಶ್ರೀಲಕ್ಷ್ಮೀತಾತಾಚಾರ್ಯರು

1. ಮೂರು ವರುಷಗಳು ಕಳೆದಿವೆ ನೀವು ತೀರಿಕೊಂಡು,
ನೂರು ವರುಷಗಳು ಇರುವಿರೆಂದು ಅಸೆಯಿಂದಿದ್ದೆವು.
ನೂರಾರು ನಿಮ್ಮಯೋಜನೆಗಳನು ಸಂಪೂರ್ಣ ಮಾಡುವಿರೆಂದು,
ಯಾರಿಗೂ ಸುಳಿವಿರಲಿಲ್ಲಧಿಡೀರನೆ ಕಣ್ಮರೆಯಾಗುವಿರೆಂದು!

2. ಆಳ್ವಾರ್ ಸ್ವಾಮಿಗಳ ವಂಶದಲಿ ಹಿರಿಯ ಮಗನಾಗಿ ಜನಿಸಿ,
ಆಳವಾಗಿ ಶಾಸ್ತ್ರಗಳ ಅಧ್ಯಯನ ಮಾಡಿ ಜ್ಞಾನಿಯಾಗಿ,
ಏಳಿಗೆಯ ಹಾದಿಯಲಿ ದಿಟ್ಟ ಹೆಜ್ಜೆಗಳನಿಟ್ಟು ನಡೆದು,
ನಾಳೆಗೆ ಬೇಕಾಗುವ ಆಧುನಿಕ ವಿದ್ಯೆಗಳಲೂ ನಿಪುಣರಾದಿರಿ.

3. ಹಿರಿಯ ಮನೆತನದಲಿ ಹಿರಿಯರು ಹೇಳಿದಂತೆ ನಡೆದಿರಿ,
ಹರೆಯದ ಉತ್ಸಾಹದಲಿ ಮರೆಯದೆ ಕರ್ತವ್ಯಗಳ ನಿರ್ವಹಿಸಿದಿರಿ,
ಹರಿಸೇವೆಯಲಿ ನಿರತರಾಗಿ ಧನ್ಯರಾದಿರಿ,
ಗುರುಪರಂಪರೆಯಲಿ ಪ್ರಿಯ ಶಿಷ್ಯರೊಡನೆ ಒಡನಾಡಿದಿರಿ.

4. ಎತ್ತರದ ಆಕರ್ಷಕ ವ್ಯಕ್ತಿತ್ವ, ಸಿ೦ಹ ನಡೆ,
ಎದುರಾಳಿಗಳ ನಡುಗಿಸುವಂತಹ ಆಳವಾದ ಧ್ವನಿ,
ಮತ್ತೆಮತ್ತೆ ನೋಡುವಂತಹ ಬ್ರಹ್ಮವರ್ಚಸ್ಸು,
ಹತ್ತಾರು ಹಲವಾರು ವಿಷಯಗಳಲ್ಲಿ ತೀರ್ವ ಆಸಕ್ತಿ,
ಆಳವಾದ ಅಧ್ಯಯನ, ಆತ್ಮವಿಶ್ವಾಸ,
ಮತ್ತಾರೂ ಸಾಧಿಸಲಾಗದಂತಹ ಅಪಾರ ಸಾಧನೆಗಳು.

5. ಗೋಶಾಲೆ, ತೋಟಗಾರಿಕೆ, ಕೃಷಿ, ಸಂಗೀತ ಇತ್ಯಾದಿ ಹಲವಾರು ಹವ್ಯಾಸಗಳಲಿ ನಿಪುಣರಾದಿರಿ,
ಪಂಡಿತರು, ಪಾಮರರು, ವಿಜ್ಞಾನಿಗಳು ಅಚ್ಚರಿಯಿಂದ
ಮೂಗಿನ ಮೇಲೆ ಬೆರಳಿಟ್ಟುನೋಡುತಲಿದ್ದರು,
ಬಿರುದು ಸನ್ಮಾನಗಳ ಸುರಿಮಳೆಯಲಿ ಮುಳುಗಿದಿರಿ,
ರಾಷ್ಟ್ರಪತಿಗಳೂ ಮೆಚ್ಚಿ ಕರೆದು ಸನ್ಮಾನಿಸಿ ವಿಜೃಂಭಿಸಿದರು.

6. ರಾಮಾನುಜಾಚಾರ್ಯರ ಪಾತ್ರ ಅದ್ಭುತವಾಗಿ ನಟಿಸಿ ಸಿದ್ಧಾಂತ ಪ್ರಚಾರ ಮಾಡಿದಿರಿ,
ರಾಮಾನುಜರ ಪಾದೆಯಲ್ಲಿ ನಡೆದು ನೂರಾರು ಸಾಧಿಸಿದಿರಿ,
ರಾಮಾನುಜರಂತೆ ಮೇಲುಕೋಟೆಯ ಜೀರ್ಣೋದ್ಧಾರ ಮಾಡಿ ವಿಜಯಪತಾಕೆ ಹಾರಿಸಿದಿರಿ,
ಸೀಮೆಯ ದಾಟದೆಯೇ ಅಂತರ ರಾಷ್ಟ್ರೀಯ ಖ್ಯಾತಿಯ ಗಳಿಸಿದಿರಿ.

7. ಕೊನೆಯಲ್ಲಿ ಅಭಗವಂತನಿಗೇ ನಿಮ್ಮಸಾಧನೆಯ ನೋಡಿ ಅಸೂಯೆಯಾಯಿತೇನೊ!
'ನನ್ನಜೊತೆಯಲ್ಲಿಯೇ ಇರು' ಎಂದು ನಮ್ಮಿಂದ ಕಸಿದುಕೊಂಡ,
ತನ್ನವರನ್ನೆಲ್ಲ ತೊರೆದು ನರಹರಿಯ ಪಾದದಲಿ ಲೀನವಾದಿರಿ,
ಕಳಚಿಬಿತ್ತು ಮೇಲುಕೋಟೆಯ ಜ್ಞಾನಮಂದಿರದ ಸ್ವರ್ಣಕಳಶ!