ಪರಮಪೂಜ್ಯ ಅಣ್ಣನವರ ಸ್ಮರಣೆ
ಓಂ ನಮೋ ನಾರಾಯಣಾಯ
ನಮ್ಮ ಪರಮಪೂಜ್ಯ ಅಣ್ಣನವರ ವಿಚಾರವಾಗಿ ಒಂದೆರಡು ಮಾತುಗಳನ್ನು ತಿಳಿಸಲು ಇಚ್ಚಿಸುತ್ತೇನೆ. ಅವರು ಸದಾ ಹಸನ್ಮುಖಿ, ಶ್ರಮಜೀವಿ, ಧೈರ್ಯಶಾಲಿ, ಕರುಣಾಮಯಿ. ಬೇರೆಯವರ ಕಷ್ಟಗಳನ್ನು ಕೇಳಿ ಮರುಗಿ ಏನು ಬೇಕಾದರೂ ಸಹಾಯ ಮಾಡುತ್ತಿದ್ದರು. ತಮ್ಮ ಕಷ್ಟಕಾರ್ಪಣ್ಯಗಳನ್ನು ಯಾರಿಗೂ ತೋರಿಸುಕೊಳ್ಳುತ್ತಿರಲಿಲ್ಲ. ಅವರ ಮದುವೆ ಆದಾಗಲಿಂದ ನಮ್ಮ ಸಂಸಾರವೂ ಅವರ ಸಂಸಾರವೂ ಜೊತೆಯಲ್ಲೇ ಇದ್ದವು. ಅವರ ಸರಳ ಮನೋಭಾವ ನಮಗೆ ತುಂಬಾ ಹಿಡಿಸಿತ್ತು. ನಮ್ಮ ಸಂಸಾರವು ಸಮರಸವಾಗಿತ್ತು. ನಾನು ಅಡುಗೆ ಮಾಡಿದರೆ ಅವರು ತುಂಬಾ ಇಷ್ಟಪಟ್ಟು ಊಟ ಮಾಡುತ್ತಿದ್ದರು. ಇದು ನನ್ನ ಭಾಗ್ಯ ಎಂದು ತಿಳಿದಿದ್ದೇನೆ.
ನಮ್ಮ ಅಣ್ಣನವರು ತುಂಬಾ ಸರಳಜೀವಿ, ಸಂಗೀತ ಪ್ರೇಮಿ, ಬಹಳ ಬುದ್ಧಿಶಾಲಿ. ಯಾವಾಗಲೂ ಚಟುವಟಿಕೆಯಿಂದಲೇ ಇರುತ್ತಿದ್ದರು. ಏನಾದರೂ ಮಹತ್ತಾಗಿ ಸಾಧಿಸಬೇಕೆಂದು ಹಠ ತೊಟ್ಟು ಅದನ್ನು ಸಾಧಿಸಿಯೇ ತೋರಿಸುತ್ತಿದ್ದರು. ಪಾಕಶಾಸ್ತ್ರದಲ್ಲೂ ನಿಷ್ಣಾತರು. ಮೈಸೂರು ಪಾಕ್ ಮಾಡುವುದರಲ್ಲಂತೂ ಎತ್ತಿದಕೈ. ನಾವು ಅರ್ಧರಾತ್ರಿಯಲ್ಲಿ ಕೇಳಿದರೂ ಬೇಸರವಿಲ್ಲದೆ ಆನಂದದಿಂದ ಮಾಡಿಕೊಡುತ್ತಿದ್ದರು. ಅವರು ಪಂಚಭಾಷಾ ಪ್ರವೀಣರು.
ನಾನು ಸಾಕಷ್ಟು ಸಂಸ್ಕೃತ ಭಾಷೆಯನ್ನ ಓದಿದ್ದೇನೆಂದು ನನ್ನಲ್ಲಿ ಅವರಿಗೆ ತುಂಬಾ ಅಭಿಮಾನವಿತ್ತು. ಇಂತಹವರ ಪ್ರೀತಿ-ವಾತ್ಸಲ್ಯದಿಂದ ಈಗ ನಾವು ವಂಚಿತರಾಗಿದ್ದೇವೆಂದು ತಿಳಿಸಲು ನನಗೆ ದುಃಖಮಯವಾಗಿದೆ. ಇನ್ನೂ ಬಹಳ ವಿಷಯಗಳು ಇವೆ. ಆದರೆ ನನ್ನಿಂದ ಬರೆಯಲು ಸಾಧ್ಯವಿಲ್ಲ. ಅವರ ಪಾದಾರವಿಂದಗಳಿಗೆ ನನ್ನ ಈ ಲೇಖನವನ್ನು ಅರ್ಪಿಸುತ್ತಾ ನಾನು ಇಲ್ಲಿಗೆ ಅಂತ್ಯಗೊಳಿಸುತ್ತೇನೆ.