ಪ್ರಾತಃ ಸ್ಮರಣೀಯ ವಿದ್ವಾನ್ ಪ್ರೊ.ಲಕ್ಷ್ಮೀತಾತಾಚಾರ್ಯರು
ನಾನು ಪ್ರೊ.ಲಕ್ಷ್ಮೀತಾತಾಚಾರ್ಯರನ್ನು ಪ್ರಥಮ ಬಾರಿ ಕಂಡದ್ದು ೧೯೬೪ನೆಯ ಇಸವಿಯಲ್ಲಿ ಬೆಂಗಳೂರಿನ ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ವಿಶ್ವಸಂಸ್ಕೃತ ಪರಿಷತ್ತು ರಾಷ್ಟ್ರಪತಿ ಡಾ॥ ಎಸ್.ರಾಧಾಕೃಷ್ಣನ್ ಉದ್ಘಾಟಿಸಿದ ದಿನ. ಯುವಕರಾಗಿದ್ದ ಲಕ್ಷ್ಮೀತಾತಾಚಾರ್ಯರು ತೇಜಃ ಪುಂಜದಂತೆ ಚಿದಗ್ನಿಕುಂಡ ಸಂಭೂತರಂತೆ ಹೊಳೆಯುತ್ತಿದ್ದರು. ಮೂರು ದಿನಗಳ ಆ ಸಮಾರಂಭದಲ್ಲಿ ಸಂದರ್ಭ ಬಂದಾಗ ಅವರು ಕನ್ನಡದಲ್ಲೂ ಇಂಗ್ಲೀಷಿನಲ್ಲೂ ಸಂಸ್ಕೃತದಲ್ಲೂ ಓಜಸ್ವಿಯಾದ ಶೈಲಿಯಲ್ಲಿ ಮಾತನಾಡಿ ಜನರನ್ನು ಆಕರ್ಷಿಸಿದ್ದುದು ನನಗೆ ನೆನಪಿನಲ್ಲಿದೆ. ಆಮೇಲೆ ಅನೇಕ ವರ್ಷ ನಮ್ಮ ಪರಸ್ಪರ ಭೇಟಿಯಾಗಿರಲಿಲ್ಲ. ಮೇಲುಕೋಟೆಯ ಸಂಸ್ಕೃತ ಕಾಲೇಜಿನ ಶತಮಾನೋತ್ಸವದಲ್ಲಿ ಅವರನ್ನು ಕಂಡಿದ್ದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶಾಸ್ತ್ರಬೋಧನೆಯನ್ನು ಮಾಡುತ್ತಿದ್ದ ಅವರು ಮೇಲುಕೋಟೆಯಲ್ಲಿ ಸ್ವತಂತ್ರವಾದ ಸಂಸ್ಕೃತ ಸಂಶೋಧನ ಸಂಸತ್ತನ್ನು ಸ್ಥಾಪಿಸುವ ಕನಸನ್ನು ಆಗ ಹೊಂದಿದ್ದರು. ಅದು ಹೇಗೆ ಸಾಧ್ಯವಾದೀತು ಎಂಬ ಸಂಶಯ ಎಲ್ಲಾ ವಿದ್ವಾಂಸರಲ್ಲೂ ಇತ್ತು. ’ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ’ ಎಂಬಂತೆ ಆಚಾರ್ಯರು ಅಸಾಧ್ಯವನ್ನು ಸಾಧ್ಯವನ್ನಾಗಿ ಮಾಡಿ ಸಂಸ್ಕೃತ ಸಂಶೋಧನ ಸಂಸತ್ತನ್ನು ಅಸ್ತಿತ್ವಕ್ಕೆ ತಂದರು, ಅಭಿವೃದ್ಧಿಪಡಿಸಿದರು. ಆಗ ಕೆಲವು ದಿನ ಸುವರ್ಣಯುಗವೆಂದು ಕರೆಸಿಕೊಳ್ಳಲು ಅರ್ಹವಾಗಿತ್ತು ಎಂದು ನನ್ನ ಭಾವನೆ. ಅವರು ಮೇಲುಕೋಟೆಯಲ್ಲಿ ಮಾತ್ರವಲ್ಲ, ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಲ್ಲೂ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನ್ನನ್ನೂ ಆಹ್ವಾನಿಸುತ್ತಿದ್ದರು. ಅದರಿಂದ ನನಗೆ ಡಾ.ರಾಜಾರಾಮಣ್ಣನವರಂತಹ ವಿಜ್ಞಾನಿಗಳೊಡನೆ ಮಾತನಾಡುವ ಅವಕಾಶ ದೊರಕಿತು. ತಿಳಿವನ್ನು ಕೊಂಚ ವಿಸ್ತರಿಸಿಕೊಳ್ಳುವಂತಾಯಿತು. ಆಚಾರ್ಯರು ಹೃದಯವೈಶಾಲ್ಯದಿಂದ ನನ್ನನ್ನು ತಮ್ಮನಂತೆ ಕಂಡು ವಿಶ್ವಾಸದಿಂದ ಮಾರ್ಗದರ್ಶನ ಮಾಡುತ್ತಿದ್ದರು. ನನ್ನ ಗುರುಗಳಾಗಿದ್ದ ವಿದ್ವಾನ್ ಎನ್.ಎಸ್.ರಾಮಭದ್ರಾಚಾರ್ಯರು, ವಿದ್ವಾನ್ ಎಸ್.ಎಂ.ಎಸ್.ವರದಾಚಾರ್ಯರು, ವಿದ್ವಾನ್ ಕೆ.ಎಸ್. ವರದಾಚಾರ್ಯರು ಇವರೆಲ್ಲ ನಿವೃತ್ತರಾದ ಮೇಲೂ ಮೇಲುಕೋಟೆಯ ಸಂಸ್ಕೃತ ಸಂಶೋಧನ ಸಂಸತ್ತಿನಲ್ಲಿ ಶ್ಲಾಘನೀಯ ಕಾರ್ಯಗಳನ್ನು ಮಾಡಿ ವಿಶಿಷ್ಟಾದ್ವೈತದ ಗ್ರಂಥ ಸಂಪತ್ತನ್ನು ಹೆಚ್ಚಿಸುವ ಕೆಲಸವನ್ನು ಮಾಡಿದ್ದರೆ ಅದರ ಮುಖ್ಯ ಕಾರಣ ಪ್ರೊ.ಲಕ್ಷ್ಮೀತಾತಾಚಾರ್ಯರು. ಅಂತಹ ಕರ್ತೃತ್ವಶಕ್ತಿಯನ್ನು ಪಡೆದಿದ್ದ ವ್ಯಕ್ತಿಗಳು ಅತಿವಿರಳ. ವಿದ್ವಾಂಸರಲ್ಲಿ ಅವರಿಗೆ ವಿಶೇಷ ಗೌರವ. ವರದಾಚಾರ್ಯರನ್ನು ಸದಾ ’ವರದಾಚಾರ್ಯಸ್ವಾಮಿಗಳು’ ಎಂದೇ ಅವರು ಉಲ್ಲೇಖಿಸುತ್ತಿದ್ದರು. ಸ್ವಮತೀಯರಲ್ಲಿ ಮಾತ್ರವಲ್ಲ, ವಿದ್ಯೆ ಯಾರಲ್ಲಿದ್ದರೂ ಅವರನ್ನು ಗೌರವಿಸುತ್ತಿದ್ದರು. ’ವಿದ್ವಾಂಸೋ ವಸುಧಾತಲೇ ಪರವಚಃ ಶ್ಲಾಘಾಸು ವಾಚಂಯಮಾಃ’ ಎಂಬ ಮಾತಿದೆ. ಬೇರೆಯವರ ಮಾತನ್ನು ಹೊಗಳಬೇಕಾದ ಸಂದರ್ಭ ಬಂದಾಗ ವಿದ್ವಾಂಸರು ಮೌನವ್ರತವನ್ನು ಆಶ್ರಯಿಸುತ್ತಾರೆ ಎಂದು ಅದರ ಅರ್ಥ. ಇದಕ್ಕೆ ಅಪವಾದವಾಗಿದ್ದ ವಿದ್ವಾಂಸರು ಶ್ರೀ ಲಕ್ಷ್ಮೀತಾತಾಚಾರ್ಯರು. ತಮ್ಮ ವಿಷಯದಲ್ಲಿ ಮೌನವಹಿಸಿ ಪರಗುಣಗಳ ಬಗೆಗೆ ಅವರು ಸಹಸ್ರವದನರಾಗುತ್ತಿದ್ದರು.