ನನ್ನ ಪ್ರೀತಿಯ ಮಾಮ

ನಮ್ಮ ಚಿಕ್ಕವಯಸ್ಸಿನಿಂದ ನಾವು ಮಾಮನವರ ಹತ್ತಿರ ಬೆಳೆದಿದ್ದು ನಮ್ಮ ಭಾಗ್ಯ ಎಂದು ಹೇಳಬಹುದು. ಚಿಕ್ಕವಯಸ್ಸಿನಲ್ಲಿ ನನಗೆ ಮಾಮನವರನ್ನು ಕಂಡರೆ ಭಯ ಜಾಸ್ತಿ ಇರುತ್ತಿತ್ತು. ಆದರೆ ಬೆಳೆದು ದೊಡ್ಡವರಾದ ಮೇಲೆಯೇ ಮಾಮಾವಿನ ನಿಜವಾದ ಹಿರಿಮೆ ನಮ್ಮ ಮೆದುಳಿಗೆ ಅರ್ಥವಾದದ್ದು ಅಂದರೆ ತಪ್ಪಲ್ಲ.

ನನ್ನನ್ನು ಮಗುವಾಗಿ ಆಟ ಆಡಿಸಿ, ಸಂಸ್ಕೃತ ಕಲಿಸಿದ ಗುರುವಾಗಿ ಕೊನೆಗೆ ತಂದೆ ಸ್ಥಾನದಲ್ಲಿ ನಿಂತು ನನ್ನ ಮದುವೆಯನ್ನು ಕೂಡ ಮಾಡಿ ಜೀವನದ ಹಾದಿ ಮಾಡಿಕೊಟ್ಟರು. ನನ್ನ ಜೀವನ ಈ ಹಂತ ತಲುಪಲು ಅವರೇ ಕಾರಣ ಎನ್ನಬಹುದು.

ನನ್ನ ಬಾಲ್ಯದ ತುಂಬ ಇಷ್ಟವಾದ ಸ್ಮರಣೆ - ಮಾಮನ ಕಾಲು ಒತ್ತುವುದು. ಇದು ನನ್ನ ಕಾಲು ಅದು ನಿನ್ನ ಕಾಲು ಎಂದು ನಾವು ಮಕ್ಕಳು ಗುರು ಶಿಷ್ಯರ ತರಹ ಜಗಳವಾಡುತ್ತಿದ್ದೆವು. ಇಡೀ ದಿವಸ ಕೆಲಸ ಮಾಡಿ, ಓಡಾಡಿ ತುಂಬ ಸುಸ್ತಾಗಿ ಹತ್ತು ನಿಮಿಷ ವಿಶ್ರಾಂತಿ ಮಾಡಲು ಪ್ರಯತ್ನ ಮಾಡುತ್ತಿದ್ದ ಮಾಮನ ಕಾಲುಗಳನ್ನು ಸಂತೋಷದಿಂದ ನಾವು ಒತ್ತುತ್ತಿದ್ದೆವು.

ಒಂದು ಬೇಸಗೆ ರಜೆಯಲ್ಲಿ ನಾನು, ದಿವ್ಯ, ಮಾಮ ಮತ್ತು ನಮ್ಮ ಪ್ರೀತಿಯ ಮಾಮಿಯ ಜೊತೆಗೆ ಶಿವಮೂಗ್ಗ ಪ್ರವಾಸ ಹೂರಟೆವು. ಆಗ ಮಾಮನವರ ಹತ್ತಿರ ಒಂದು ದೊಡ್ಡ ಜೀಪ್ ಇತ್ತು. ನಾವೆಲ್ಲ ಮಕ್ಕಳು ಹೂರಡುವ ಮುನ್ನ ದೂರು ಮಾಡಲು ಶುರು ಮಾಡಿದೆವು ಓ ಎಷ್ಟು ದೂರ ಕೂತು ಪ್ರಯಾಣ ಮಾಡಬೇಕೆಂದು. ಎಲ್ಲರು ಸಿದ್ಧವಾಗಿ ಗಾಡಿ ಏರಬೇಕು ಆಗ ಮಾಮ ಗಾಡಿಯ ಟ್ರಂಕ್ ಅನ್ನು ತೆಗೆದು, ನನ್ನನ್ನು ಮತ್ತು ದಿವ್ಯ ಳನ್ನು ನೀವು ಹಿಂದೆ ಕುಳಿತುಕೊಳ್ಳಿ ಎಂದರು. ಮುಂಚೆಯೆ ನಮಗೆ ಕಸಿವಿಸಿ ಅಯ್ಯೋ ಅಷ್ಟು ದೂರ ನಾವು ಹಿಂದೆ ಕೂರಬೇಕೆ ಎಂದು ತಲೆ ಕೆಡಿಸಿಕೊಂಡು ಒಳಗೆ ನೋಡಿದರೆ, ಮಾಮ ನಮಗೆ ಅಂತ ಹಾಸಿಗೆ ಹಾಕಿ ಹೊದಿಕೆ ಇಟ್ಟಿದ್ದರು. ನಾವು ಪ್ರಯಾಣಪೂರ್ತಿ ಹಿಂದೆ ಮಲಗಿಕ್ಕೊಂಡು ಸಂಗೀತ ಕೇಳುತ್ತಾ ಆನಂದವಾಗಿ ಪ್ರಯಾಣಮಾಡಿದೆವು. ನಾವು ನಮ್ಮ ಜಾಗ (ಆಸನ) ಗಟ್ಟಿಯಾಯಿತು, ವಾಪಸ್ಸು ಬರುವವಾಗಲೂ ಪ್ರಯಾಣ ಹೀಗೆಯೇ ಇರುತ್ತದೆ ಎಂದುಕೊಡಿದ್ದೆವು. ಆದರೆ ಬರುವಾಗಿನ ಸಂಗತಿಯೇ ಬೇರೆ! ಗಾಡಿಯಲ್ಲಿ ಹಿಂದೆ, ಮುಂದೆ ಎಲ್ಲಾ ಪುಸ್ತಕ ತುಂಬಿದ್ದು, ನಾವು ಐದು ಜನರೂ ಒಂದೇ ಸೀಟಿನಲ್ಲಿ ಕೈಕಾಲು ಮುದುರಿಕ್ಕೊಂಡು ಕೂತುಕೊಳ್ಳುವಂತಾಯಿತು. ಅದರೂ, ಮಾಮನವರ ಜೊತೆಯಲ್ಲಿ ಪ್ರಯಾಣ ಮಾಡುವೆಂದರೆ ಅದು ಒಂದು ಅದ್ಭುತ ಅನುಭವ. ಅಲ್ಲಲ್ಲೇ ಗಾಡಿ ನಿಲ್ಲಿಸುವುದು, ಹಸುಗಳನ್ನು ನೋಡುವುದು, ಸಸಿಗಳನ್ನು ಕೊಳ್ಳುವುದು, ಇತ್ಯಾದಿ ಇತ್ಯಾದಿ.

ಮಾಮ ಅವರು ಬಹಳ ಸರಳವ್ಯಕ್ತಿ. ನಾನು ಅಮೆರಿಕದಿಂದ ಮೇಲುಕೋಟೆ ದೇವರ ದರ್ಶನ ಮಾಡಲು ನನ್ನ ಯಜಮಾನರು ಮತ್ತು ಒಂದೂವರೆ ವರ್ಷದ ಮಗು ಆರ್ಯಕೃಷ್ಣ ಜೊತೆ ಹೋಗಿದ್ದೆನು. ನಾವು ದೇವರ ದರ್ಶನ ಮುಗಿಸಿ ಮನೆಗೆ ಬರುವಷ್ಟರಲ್ಲಿ ಬೇಗ ಒಂದು ಬೆಳ್ಳಿ ಲೋಟದಲ್ಲಿ ಮಗುವಿಗೆ ಬಿಸಿ ಬಿಸಿಯಾದ ಹಾಲನ್ನು ಹಿಡಿದುಕ್ಕೊಂಡು ನಿಂತಿದ್ದರು. ಅದನ್ನು ನೆನಸಿಕೊಂಡರೆ ಇವತ್ತಿಗೂ ಕಣ್ಣಲ್ಲಿ ನೀರು ತುಂಬಿ ಬರುತ್ತದೆ.

ಹೊರಗಿನ ಪ್ರಪಂಚಕ್ಕೆ ಮಾಮ ಅತಿ ದೊಡ್ಡ ವಿದ್ವಾಂಸ ಮತ್ತು ತತ್ವಜ್ಞಾನಿ. ಅವರ ಹಿರಿಮೆ ನಮಗೆ ಕಲ್ಪನೆ ಮಾಡಿಕೊಳ್ಳಲು ಅಸಾಧ್ಯ. ಅವರ ನೆರಳಲ್ಲಿ ನಾವು ನಮ್ಮ ಕೆಲವು ವರ್ಷ ಈ ಜೀವನವನ್ನು ಕಳೆದೆವು ಎನ್ನವುದೇ ಸಂತೋಷ. ಅವರು ಅರಳಿ ಮರದ ಸಂಕೇತ. ಅವರ ಬೇರು ಬಹಳ ಆಳ, ಅಗಲ ಹಾಗೂ ಎಲ್ಲೆಲ್ಲೂ ಹರಡಿದೆ. ಅವರ ಜೀವನದ ಹಿರಿಮೆ, ಕೊಡುಗೆ ಅಪಾರ. ಅದರ ಬಗ್ಗೆ ಹೇಳಲು, ಬರೆಯಲು ನಾವು ಎಷ್ಟು ಸಮರ್ಥರು ಎಂದು ತಿಳಿಯದು. ಆದರೆ ಅವರ ಜೀವನಶೈಲಿಯಲ್ಲಿ ನಡೆದ ದಾರಿಯಲ್ಲಿ ಒಂದು ಶೇಕಡವಾದರೂ ನಡೆಯಬೇಕು ಎನ್ನುವುದು ನನ್ನ ಧ್ಯೇಯ. ಇಂತಹ ಕುಟುಂಬದ ವಂಶಾವಳಿಯಲ್ಲಿ ನಾವು ಹುಟ್ಚಿ ಬೆಳೆದೆವು ಎನ್ನುವುದು ಬಹಳ ಹೆಮ್ಮೆಯ ವಿಚಾರ.