ನನ್ನೂಲುಮೆಯಾ, ನಲುಮೆಯ ನಮ್ಮ ಅಣ್ಣ

ಕಲಾ ತಪಸ್ವಿ, ಅಜಾನುಬಾಹು, ಹಸನ್ಮುಖಿ, ಸಹೃದಯಿ ಮತ್ತು ಪ್ರಾವೀಣ್ಯತೆಯೇ ಮೂರ್ತಿವೆತ್ತ ಸರಳ ಧೀಮಂತವ್ಯಕ್ತಿ ನನ್ನೊಲುಮೆಯ, ನಲುಮೆಯ ನಮ್ಮ ಅಣ್ಣ ಶ್ರೀಮಾನ್ ಲಕ್ಷ್ಮೀತಾತಾಚಾರ್ಯರು ಅವರಿಗೆ ನನ್ನ ಕಿರುನುಡಿ ನಮನ. ನಮ್ಮಚಾಮಿ ಅಣ್ಣನೆಂದರೆ ಶಿಸ್ತು, ಸಂಯಮ, ಪ್ರಾವೀಣ್ಯತೆ ಎಲ್ಲದರಲ್ಲೂ ಎತ್ತಿದ ಕೈ. ಅವರ ಬಗ್ಗೆ ಬರೆಯಲು ಕನ್ನಡ ವರ್ಣಮಾಲೆಯ ಪದಗಳೇ ಸಾಲದು. ಅದೊಂದು ಸ್ಮರಣೀಯ ಸಂದರ್ಭ. ಒಮ್ಮೆ ನಾನು, ರೂಪಾ ಮುಂತಾದವರು ಮೇಲುಕೋಟೆಗೆ ದೇವರ ದರ್ಶನ ಮಾಡಲು ಹೋಗಿದ್ದೆವು. ದೇವಸ್ಥಾನ, ಬೆಟ್ಟದಲ್ಲಿ ದರ್ಶನ ಮುಗಿಸಿಕೊಂಡು ಸುಮಾರು ೪.೩೦-೫ರ ವೇಳೆಗೆ ನಮ್ಮ ಮನೆಗೆ ಬಂದೆವು. ನಾನು ಒಂದು ಸಣ್ಣಡಬ್ಬಿಯಲ್ಲಿ ಮೊಸರನ್ನವನ್ನು (ನನಗೆ ಮಾತ್ರ) ತೆಗೆದುಕೊಂಡು ಹೋಗಿದ್ದೆ.

ಉಳಿದವರು ಹೊರಗಡೆ ಊಟ ಮಾಡುವರೆಂದು. ಅಣ್ಣನವರಿಗೆ ಹೇಳಿದೆ. ಆದರೆ ಅವರು ಅದಕ್ಕೊಪ್ಪದೇ ಕೂಡಲೇ ತಾವೇ ಅಡುಗೆ ಮಾಡುವೆನೆಂದು ಹೊರಟರು ಎಷ್ಟು ಬೇಡವೆಂದರೂ ಕೇಳಲೇ ಇಲ್ಲ. ೩/೪- ೧ ಗಂಟೆಯೊಳಗೆ ಮೃಷ್ಟಾನ್ನ ಭೋಜನವನ್ನು ತಯಾರು ಮಾಡಿದ್ದರು. ನಂತರ ಅವರ ನಳಪಾಕವನ್ನು ಎಲ್ಲರೂ ಆನಂದದಿಂದ ಸವಿದೆವು. ಇದು ಅವರ ಪ್ರೀತಿ ವಿಶ್ವಾಸದ ಕುರುಹು. ಅಲ್ಲದೇ ಅವರು ಕ್ಷಣಾರ್ಧದಲ್ಲಿ ಮೈಸೂರು ಪಾಕನ್ನು ಬಾಯಲ್ಲಿ ನೀರೂರಿಸುವ ಹಾಗೆ ಮಾಡುವುದರಲ್ಲಿ ನಿಮರು (ನಮ್ಮಮಾತೃಶ್ರೀ ಅಮ್ಮನವರಂತೆ).

ಮತ್ತೊಂದು ಪ್ರಸಂಗ: ನಾವು ಮೇಲುಕೋಟೆಗೆ ಹೋಗುವಾಗ ಕಡಲೇಕಾಯಿಯನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅದು ಅವರಿಗೆ ಪರಮ ಪ್ರೀತಿ. ಅದನ್ನು "ಬಡವರ ಬಾದಾಮಿ" ಎ೦ದೇ ಪ್ರೀತಿಯಿಂದ ಸವಿಯುತ್ತಿದ್ದರು.

ನಾನು ಪ್ರತಿವರ್ಷವೂ ನಮ್ಮ "ಗಾನ ಸೌರಭ ಕಲಾ ಕೇಂದ್ರ"ದ ವತಿಯಿಂದ ಶ್ರೀ ತ್ಯಾಗರಾಜರ ಆರಾಧನೆ ಕಾರ್ಯಕ್ರಮ ನಡೆಸುತ್ತಿದ್ದೆ. ಪ್ರತಿವರ್ಷವೂ ಅದರಲ್ಲಿ ತಪ್ಪದೇ ಅನ್ವಯಿಸಿ ಸಂಪೂರ್ಣ ಉತ್ತೇಜನ ಕೊಡುತ್ತಿದ್ದರು ಮತ್ತು ಕಲಾವಿದರುಗಳಿಗೆ ತಾವೇ ಸ್ವತಃ ನಿಂತು ಶಾಲು ಹೊದಿಸಿ ಸನ್ಮಾನವನ್ನು ಸಂತೋಷದಿಂದ ಮಾಡುತ್ತಿದ್ದರು.

ಒಮ್ಮೆ ನಾನು ತೀ. ಅಣ್ಣ ನವರನ್ನು ಕೇಳಿ ಮೇಲುಕೋಟೆ "ಶ್ರೀ ಚೆಲುವ ನಾರಾಯಣ" ಸ್ವಾಮಿಯುವರ ಕುರಿತು ಹಾಡುಗಳನ್ನು ಹಾಡಬೇಕೆಂದು ಅಸೆಪಟ್ಟಿದ್ದೆ. ಶ್ರೀ ದಾಸವರೇಣ್ಯರ ಕೀರ್ತನೆಗಳಲ್ಲದೇ ನಮ್ಮ ಶ್ರೀಮತಿ ಗೋದಾ ಮಗ್ನಿಯವರು ಕೆಲವು ಹಾಡುಗಳನ್ನು ರಚಿಸಿ ಕೊಟ್ಟಿದ್ದರು. ಹಾಡುಗಳನ್ನು ಹಾಡಿ "ಸೂಡಿಯೋ ರೆಕಾರ್ಡಿಂಗ್" ಮಾಡಿದೆವು. ನಂತರ ಅದಕ್ಕೆ ಏನು ಹೆಸರು (Title) ಕೊಡಬೇಕೆಂದು ಯೋಚಿಸುತ್ತಿದ್ದೆವು. ಆಗ ತೀ. ಅಣ್ಣನವರು "ಯದುಶೈಲ ದೀಪಮ್" ಎಂದು ಹೆಸರಿಸುವಂತೆ ಹೇಳಿದರು. ಆಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ಹಾಗೆಯೇ ಕ್ಯಾಸೆಟ್ಟನ್ನು ಅವರೇ ಲೋಕಾರ್ಪಣೆ (Release) ಮಾಡಿದರು. ಹೀಗೆಯೇ ಹತ್ತು ಹಲವಾರು ರೀತಿಯಲ್ಲಿ ಅವರು ನಮ್ಮೆಲ್ಲರಿಗೂ ಸಹಾಯ, ಸಹಕಾರ, ಪ್ರೀತಿ ವಿಶ್ವಾಸವನ್ನು ತೋರಿಸುತ್ತಿದ್ದರು.

ಅಂತಹ ಕಣ್ಮಣಿಯನ್ನು ಕಳೆದುಕೊಂಡ ನಾವೇ ದೌರ್ಭಾಗ್ಯರು, ಅವರ ಅತ್ಮವು ಸದಾ ಸರ್ವಕಾಲವೂ ಶಾಂತಿ, ಸಮಾಧಾನದಿಂದ ಇರಲೆಂದೂ ಮತ್ತು ಅವರ ಆಶೀರ್ವಾದವು ಸದಾ ನಮ್ಮೆಲ್ಲರಿಗೂ ಲಭಿಸಲೆಂದು ಆಶಿಸುವ...