ದಾಸನು ಕಂಡಂತೆ ಪಿತೃವರ್ಯರಾದ ತಾತಾಚಾರ್ಯರು
ಅಡಿಯೇನ್ ಮಧುರಕವಿ ಅನಂತಸುದರ್ಶನ ರಾಮಾನುಜ ದಾಸನು ಮಾಡುವ ನಮಸ್ಕಾರಗಳು.
ಗುರುಹಿರಿಯರ ಮತ್ತು ಪರಮಾತ್ಮನ ಆಶೀರ್ವಾದ ಬಲದಿಂದ, ಪೂರ್ವ ಜನ್ಮಗಳ ಪುಣ್ಯವಿಶೇಷದಿಂದ ನನಗೆ ಈ ಅನಂತಾರ್ಯರ ಕುಲದಲ್ಲಿ, ಶ್ರೀ. ಉ.ವೇ. ತಾತಾಚಾರ್ಯ ಸ್ವಾಮಿಗಳ ಎರಡನೇ ಮಗನಾಗಿ ಜನಿಸುವ ಅವಕಾಶ ಸಿಕ್ಕಿದೆ. ಅದಕ್ಕೆ ನಾನು ಎಂದೂ ಗುರುಹಿರಿಯರಿಗೂ ಪರಮಾತ್ಮನಿಗೂ ಚಿರಋಣಿಯಾಗಿರುತ್ತೇನೆ. ಹಾಗೂ ಈ ವಂಶದಲ್ಲಿ ಹುಟ್ಟಿರುವುದಕ್ಕೆ ನನ್ನ ಶಕ್ತಿ ಮೀರಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ.
ತಂದೆಯವರ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ?ನ್ನವಿಸಿಕೊಳ್ಳಲು ಬಯಸುತ್ತೇನೆ. ನಾನು ಅವರ ಮಗನಾಗಿ ಒಬ್ಬ ತಂದೆಯನ್ನು ನೋಡುವುದಕ್ಕಿಂದ ಒಬ್ಬ ಹೊರಗಿನ ವ್ಯಕ್ತಿಯಾಗಿ ಅವರನ್ನು ನೋಡಿರುವುದೇ ಹೆಚ್ಚು. ಕಾರಣ, ಈ ರಕ್ತಸಂಬಂಧದಲ್ಲಿ ಕೆಲವು ಮುಖ್ಯವಾದ ಅಂಶಗಳು ಮರೆಯಾಗುವ ಅಥವಾ ಆ ಅಂಶಗಳನ್ನು ಗುರುತಿಸುವ ಶಕ್ತಿ ಇಲ್ಲದೇ ಹೋಗಬಹುದು. ಹಾಗೆ ನೋಡಿದ್ದರಿಂದಲೇ ಅವರ ವ್ಯಕ್ತಿತ್ವ, ಸದ್ಗುಣಗಳು ಅನ್ಯಾದೃಶವಾದವು, ಅಸದೃಶವಾದವು ಎಂಬುದನ್ನು ತಿಳಿಯಲು ಸಾಧ್ಯವಾಯಿತು.
ಅವರು ಒಬ್ಬ ಸಲಹೆಗಾರರು, ಸಹಾಯಕರು, ಸಕಲಕಲಾವಲ್ಲಭರು, ಜ್ಞಾನಪಿಪಾಸು, ಸಾಂಪ್ರದಾಯಿಕ-ಆಧುನಿಕ ವಿಚಾರಗಳ ಸೇತು, ಸಂಯೋಜಕರು, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಯಾವುದೇ ವಿಷಯದ ಬಗ್ಗೆ ಅರಿತು ಮಾತನಾಡುವ ಸಾಮರ್ಥ್ಯ ಉಳ್ಳವರು (ವಾಗ್ಮಿಗಳು), ಸಂಯೋಜಕರು, ಆಯೋಜಕರು, ಮುಂದಾಳುತ್ವ ವಹಿಸಿಕೊಳ್ಳುವ ಸಾಮರ್ಥ್ಯ ಉಳ್ಳವರು, ಇತ್ಯಾದಿ ವ್ಯಕ್ತಿತ್ವಗಳನ್ನು ಗುಣಗಳನ್ನು ಪಟ್ಟಿ ಮಾಡುತ್ತಿದ್ದರೆ ಅದಕ್ಕೆ ಕೊನೆ ಇಲ್ಲ. ಅವರನ್ನು ಹಾಗೂ ಇಂತಹ ಅವರ ಗುಣಗಳನ್ನು ಗಮನಿಸಿದಾಗ ಒಂದು ಶ್ಲೋಕ ಮನಸ್ಸಿನಲ್ಲಿ ಗೋಚರಿಸುವುದು.
ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ ।
ರಾಮರಾವಣಯೋಃ ಯುದ್ಧಂ ರಾಮರಾವಣಯೋರಿವ ॥
ಎಂದರೆ, ಆಕಾಶಕ್ಕೆ ಆಕಾಶವೇ ಉಪಮೆ. ಸಾಗರಕ್ಕೆ ಇನ್ನೊಂದು ಸಾದೃಶ್ಯ ಇಲ್ಲ, ಅಂದರೆ ಸಾಗರವೇ ಉಪಮೆ. ರಾಮ-ರಾವಣರ ಯುದ್ಧಕ್ಕೆ ಮತ್ತೊಂದು ಬೇರೆ ಉಪಮೆ ಇಲ್ಲ. ಹಾಗೆಯೇ ಇವರಿಗೆ ಮತ್ತೊಬ್ಬರ ಉಪಮೆಯನ್ನು ಹೇಳಲು ಸಾಧ್ಯವೇ ಇಲ್ಲ.
ಜೊತೆಗೆ, ಇವರು ಕೈಗೊಂಡ ಅನೇಕ ಕೆಲಸಗಳು, ಸಂಸ್ಕೃತ ಸಂಶೋಧನ ಸಂಸತ್ತಿನ ಆವಿಷ್ಕಾರವಿರಬಹುದು, ಅಲ್ಲಿ ನಡೆಸಿದ ಅನೇಕಾನೇಕ ಸಂಶೋಧನೆಗಳು, ಕಾರ್ಯಾಗಾರಗಳೇ ಇರಬಹುದು ಇವುಗಳನ್ನೆಲ್ಲಾ ಗಮನಿಸಿದಾಗ, ಅದರಲ್ಲಿಯೂ ಬರಡು ಭೂಮಿಯನ್ನು ನಂದನವನ್ನಾಗಿಸಿದಾಗ, ಶ್ರೀರಾಮಾನುಜಾಚಾರ್ಯರ ತತ್ತ್ವಸಿದ್ಧಾಂತಗಳ ಪ್ರಚಾರಕ್ಕಾಗಿ ಆರಂಭಿಸಿದ ಸಂಸ್ಥೆ, ಸಂಸ್ಕೃತದಲ್ಲಿರುವ ವೈಜ್ಞಾನಿಕ ವಿಚಾರಗಳ ಬಗ್ಗೆ ಸಂಶೋಧನೆಯನ್ನು ಮಾಡುವ ಮಟ್ಟಿಗೆ ಬೆಳೆದಾಗ, ಅವರ ಕೊಡುಗೆಗೆ ರಾಷ್ಟ್ರಪತಿ ಸಮ್ಮಾನ ಸಿಕ್ಕಾಗ, ಇವರು ಮನು, ವಿಶ್ವಾಮಿತ್ರರೇ ಮೊದಲಾದವರ ಸಮಕ್ಕೆ ಇದ್ದವರೆಂದರೆ ಅತಿಶಯೋಕ್ತಿಯಾಗಲಾರದು. ಹಾಗೂ ಸಂಸ್ಕೃತಿ ಪ್ರತಿಷ್ಠಾನವನ್ನು ಆರಂಭಿಸಿ, ಅದರಲ್ಲಿ ಅನೇಕ ಸಂಶೋಧನೆ, ಪ್ರಕಾಶನಗಳನ್ನು ಹೊರ ತರುವಲ್ಲಿ ಅವರ ಪಾತ್ರಗಳನ್ನು ವಹಿಸಿರುವುದನ್ನು ನೋಡಿದಾಗಲೂ, ಅವರ ಬುದ್ಧಿಯ ಸಾಮರ್ಥ್ಯ, ಶರೀರದ ಸಾಮರ್ಥ್ಯ, ಧೈರ್ಯ ಎಲ್ಲವೂ ನಮ್ಮಂತಹವರಿಗೆ ಮಾದರಿ ಎನಿಸದಿರದು.
ಹೀಗೆಯೇ ಅವರ ಆಲೋಚನೆಗಳ ಬಗ್ಗೆ, ಪರಿಣತಿಗಳ ಬಗ್ಗೆ ಹೇಳುತ್ತಾ ಹೋದರೆ, ಹನುಮಂತನ ಬಾಲಕ್ಕಿಂತಲೂ ಉದ್ದವಾಗಬಹುದು. ಲೇಖನದ ಪದಗಳ ಅವಕಾಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನನ್ನ ಅನಿಸಿಕೆಗಳನ್ನು ಇಲ್ಲಿಗೆ ನಿಲ್ಲಿಸುತ್ತೇನೆ.
ಆದರೆ, ಕೊನೆಗೆ, ಋಗ್ವೇದದ ಒಂದು ಮಂತ್ರ ಇವರ ವಿಷಯದಲ್ಲಿ ಜ್ಞಾಪಕಕ್ಕೆ ಬರುತ್ತದೆ. ಅದು - ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ - ಎಂಬುದು. ಎಂದರೆ ತನ್ನ ಆತ್ಮದ ಉದ್ಧಾರಕ್ಕೋಸ್ಕರ (ಅಂದರೆ ಈ ಜೀವಾತ್ಮ ಈ ಮೃತ್ಯುಲೋಕದಿಂದ ಮೋಕ್ಷದ ಕಡೆಗೆ ಹೋಗಲು) ಮತ್ತು ಜಗತ್ತಿನ ಒಳಿತಿಗೋಸ್ಕರ ಎಂಬುದು ಈ ವಾಕ್ಯದ ಅರ್ಥ. ಇವರು ಮಾಡಿರುವ ಸಾಧನೆ, ಕೆಲಸ-ಕಾರ್ಯಗಳನ್ನು ಸಮಗ್ರವಾಗಿ ನೋಡಿದಾಗ, ಈ ಋಗ್-ಮಂತ್ರದ ಅರ್ಥವು ಇವರಿಗೆ ಅನ್ವರ್ಥವಾಗಿರುವುದರಲ್ಲಿ ಯಾವುದೇ ಅತಿಶಯೋಕ್ತಿಯಾಗಲೀ, ಸಂದೇಹವಾಗಲೀ ಇಲ್ಲವೇ ಇಲ್ಲ.
॥ ಶ್ರೀಮತೇ ರಾಮಾನುಜಾಯ ನಮಃ ॥