ಚಾಮಿ ಮಾಮ – ನಾನು ಕoಡoತೆ
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ ।
ಸ ಯತ್ನಮಾಣಂ ಕುರುತೇ ಲೋಕಸ್ತದನುವರ್ತತೇ ॥ 21 ॥
"ಶ್ರೇಷ್ಠ ಪುರುಷನು ಮಾಡಿದುದನ್ನು ಉಳಿದ ಜನರೂ ಅನುಕರಣೆ ಮಾಡುತ್ತಾರೆ. ಯಾವುದನ್ನು ಅವನು ಸರಿಯೆಂದು ಮಾಡುತ್ತಾನೋ ಇತರರೂ ಅದನ್ನೇ ಅನುಸರಿಸುತ್ತಾರೆ.". ಶ್ರೀಯುತ ವಿದ್ವಾನ್ ಲಕ್ಷ್ಮಿತಾತಾಚಾರ್ ರವರ ಬಗ್ಗೆ ಬರೆಯಬೇಕೆಂದಾಗ, ಒಂದು ಕ್ಷಣ ನನಗೆ ಆ ಯೊಗ್ಯತೆ ಇದೆಯೆ ಅನಿಸಿತು. ಆದರೂ ಅಂತಹ ದಿವ್ಯಚೇತನರು, ಸರ್ವದಾ ಅನುಕರಣೀಯರು ಆದ ಚಾಮಿ ಮಾಮ ಮತ್ತು ನಮ್ಮ ಕುಟು೦ಬದ ಒಡನಾಟವನ್ನು ನಾನು ತಿಳಿದಿರುವ ಮಟ್ಟಿಗೆ ಹಂಚಿಕೊಳ್ಳಲು ಮನಸ್ಸಾಯಿತು.
ಅಪ್ಪ ಮತ್ತು ಚಾಮಿ ಮಾಮ
ಮೊದಲು ನನ್ನ ಪೂಜ್ಯ ತಾಯಿ-ತಂದೆಯರ ಹಾಗೂ ಗುರು-ಹಿರಿಯರ ಚರಣಾರವಿಂದಗಳಿಗೆ ವಿನಮ್ರಳಾಗಿ ನಮಿಸುತ್ತ, ನಾ ಕಂಡ ಚಾಮಿಮಾಮರ ಬಗ್ಗೆ ನನ್ನ ಅನಿಸಿಕೆ ಹಂಚಿಕೊಳ್ಳಲು ಬಯಸುತ್ತೇನೆ.
ನನ್ನ ತಂದೆ ವಿದ್ವಾನ್ ಎಸ್ ರಾಘವನ್ ಮತ್ತು ವಿದ್ವಾನ್ ಲಕ್ಷ್ಮಿತಾತಾಚಾರ್ (ಚಾಮಿ ಮಾಮ) ಹಾಗೂ ಸಂಪತ್ ಕುಮಾರ್ ಆಚಾರ್ (ಕೋಲೆ ರಾಜು ಮಾಮ) ಅವರದು ಅಪರೂಪ, ಅನನ್ಯ, ಪ್ರಬುದ್ಧ ಸ್ನೇಹ. ಅತ್ಯ೦ತ ಸ್ನೇಹಜೀವಿಗಳು. ಕಾರಣಾಂತರಗಳಿಂದ ನನ್ನ ತಂದೆಯವರಿಗೆ ತಂದೆಯಿದ್ದರೂ ಇಲ್ಲದಂತೆ, ಒಂದು ತರದಲ್ಲಿ ಅನಾಥರಾಗಿ, ಮಂಡ್ಯಂ ಹಾಸ್ಟೆಲ್ ನಲ್ಲಿ ಇದ್ದ ಸಮಯ. ಚಾಮಿಮಾಮ, ರಾಮಾನುಜಮ್ ಮಾಮ, ನಮ್ಮ ತಂದೆಯವರು ಮೂವರು ಮಂಡ್ಯ ಹಾಸ್ಟೆಲ್ ನಲ್ಲಿ ಒಟ್ಟಿಗೆ ಇದ್ದರು.. ಅಪ್ಪ, ಚಾಮಿ ಮಾಮ ಹಾಗೂ ರಾಮಾನುಜಂ ಮಾಮ, ಒಟ್ಟಿಗೆ ಇರುತ್ತಿದ್ದರಂತೆ. ಅದೇ ರಸ್ತೆಯಲ್ಲಿದ್ದ ಅಹೋಬಿಲ ಮಠದಲ್ಲಿ ನಮ್ಮ ತಾತ ಶೇಷಾದ್ರಿ ಅಯ್ಯಂಗಾರ್ ರವರಿದ್ದರು. ಅಪ್ಪ ಮತ್ತು ಚಾಮಿಮಾಮಗೆ ಕೊಳಲು ಕಲಿಯುವ ಆಸಕ್ತಿ. ಫ್ಲೂಟ್ ದೇಶೀಕಾಚಾರ್ ಮಾಮ ಅವರಲ್ಲಿ ಕೊಳಲು ಕಲಿಯಲು ಹೋಗುತ್ತಿದ್ದದ್ದೂ ಉಂಟು. ಆದರೆ ನಮ್ಮ ತಾತನವರಿಗೆ, ಅಪ್ಪ ಕೊಳಲು ನುಡಿಸಿದರೆ ನಖಶಿಖಾ೦ತ ಸಿಟ್ಟು, ಅದಕ್ಕೇ ಚಾಮಿ ಮಾಮ ಮತ್ತು ಅಪ್ಪ ಬೆಟ್ಟದ ತಪ್ಪಲಿಗೆ ಹೋಗಿ ಅಭ್ಯಾಸ ಮಾಡುತ್ತಿದ್ದರಂತೆ.
೧೯೮೧ ನೇ ಅಕ್ಟೋಬರ್ ಮಾಹೆಯ ಕೊನೆಯ ವಾರ, ಸಂಜೆ ಸರಿಸುಮಾರು ಏಳು ಗಂಟೆಯ ಸಮಯ.. ಚಾಮಿ ಮಾಮ ಹಾಗೂ ಮಾಮಿ ನಮ್ಮ ಮನೆಗೆ ಬಂದರು. ನನ್ನ ಕಡೇ ತಮ್ಮ ಕೃಷ್ಣ ಆಗಷ್ಟೇ ಹುಟ್ಟಿ ಕೆಲವೇ ಕೆಲವು ದಿನಗಳಾಗಿದ್ದವು. ಇನ್ನೂ ಪುಣ್ಯಾಹವಾಚನವೂ ಆಗಿರಲಿಲ್ಲ. ಚಾಮಿ ಮಾಮ ಮಗುವನ್ನು ನೋಡಿ ಆಶೀರ್ವದಿಸಲು ಬಂದಿದ್ದರು. ಅಪ್ಪನಿಗೊ, ಈಗಿನ್ನೂ ವೃದ್ಧಿಯ ಸಮಯ, ನನ್ನ ಸ್ನೇಹಿತ ಇಷ್ಟು ಹೊತ್ತಿನ ಮೇಲೆ ಊರಿಗೆ (ತಿರುನಾರಾಯಣಪುರಕ್ಕೆ) ಹೋಗಿ ಸ್ನಾನ ಮಾಡಬೇಕಲ್ಲಾ ಎಂಬ ಯೋಚನೆ. ಚಾಮಿಮಾಮನಿಗೆ ಸೂಚ್ಯವಾಗಿ ಹೇಳಿದರು. ಚಾಮಿ ಮಾಮ ಕೇಳಬೇಕಲ್ಲಾ? ನಾ ಬಂದಿರೋದೆ ಮಗು ನೋಡೋದಕ್ಕೆ.. ಎಂದು ಮಗುವನ್ನು ಎತ್ತಿ ಮುದ್ದಾಡಿದ್ದರು. ನಮ್ಮ ತಂದೆಯವರು ಆಚಾರ್ಯ... ಒಂಗಾಥ್ಲೆಯುಮ್ ಒರು ಕೊಯಂದೆ ಪೊರಕುಟ್ಟುಮ್ (ನಿಮ್ಮ ಮನೆಯಲ್ಲಿಯೂ ಒಂದು ಮಗು ಹುಟ್ಟಲಿ) ಎಂದಿದ್ದರು, ತದನಂತರ ಅನಂತಿ ಹುಟ್ಟಿದ್ದು….
ನಮ್ಮ ತಂದೆ ಪ್ರತಿವರ್ಷ ವೈರಮುಡಿಗೆ ಮೇಲುಕೋಟೆಗೆ ಹೋಗುವುದೂ. ಅಲ್ಲಿಂದ ಬರುವಾಗ, ಸ್ನೇಹಿತನ ಮನೆಯಿಂದ ಏನನ್ನಾದರೂ ತರುವುದು ಸರ್ವೇ ಸಾಮಾನ್ಯವಾಗಿತ್ತು. ಚಾಮಿಮಾಮನಿಗೂ ಅಷ್ಟೇ, ತಾನು ಬೆಳೆದದ್ದನ್ನು ಸ್ನೇಹಿತ ರುಚಿ ನೋಡಬೇಕೆನ್ನುವ ಆಸೆ. ತರಕಾರಿ, ತೆಂಗಿನಕಾಯಿ... ಹೀಗೆ ಏನಾದರೂ ಕೊಡಬೇಕು. ಚಾಮಿಮಾಮ ಅವರ ತಾಯಿ, ಪಾಟಿಯವರಿಗೂ ಕೂಡ ನಮ್ಮೆಲ್ಲರ ಮೇಲೆ ಅತಿಯಾದ ಪ್ರೀತಿ, ವಿಶ್ವಾಸವಿತ್ತು.
ಭವಂತಿ ನಮಾಸ್ತರವಃ ಫಲೋದ್ಯಮೈ ನವಾಂಬುಭಿರ್ದೂರ ವಿಲಂಬಿನೋ ಘನಾಃ ಅನುದ್ಧತಾಃ ಸತ್ಪುರುಷಾಃ ಸಮೃದ್ಧಿಭಿಃ ಸ್ವಭಾವ ಏವೈಷ ಪರೋಪಕಾರಿಣಂ ಮರಗಳು ಹಣ್ಣುಗಳಿಂದ ತುಂಬಿಕೊಂಡಾಗ ನಮ್ರತೆಯಿಂದ ಬಾಗಿರುತ್ತದೆ, ಮೋಡಗಳು ಹೊಸ ನೀರಿನಿಂದ ಕೂಡಿ ದೂರದಲ್ಲಿ ಜೋತಾಡುವಂತೆ ಕಾಣುತ್ತದೆ. ಸಂಪತ್ತು ಸಮೃದ್ಧಿಗಳಿಂದ ಕೂಡಿದ ಸಜ್ಜನರು ಅಹಂಕಾರ ರಹಿತವಾಗಿ ವಿನಯದಿಂದ ಇರುತ್ತಾರೆ. ಇದು ಪರೋಪಕಾರಿಗಳ ಸ್ವಭಾವವು.
ನಮ್ಮ ತಂದೆಯವರ ಕಾಲಾನಂತರ, ಕೆಲವು ಕಾಲ, ನಮಗೆ ವೈರಮುಡಿಗೆ ಹೋಗಲಾಗಲಿಲ್ಲ. ಆದರೆ ಚಾಮಿಮಾಮ ಮತ್ತು ಮಾಮಿ, ಯಾವಾಗ ಮೈಸೂರಿಗೆ ಬ೦ದಾಗಲು ಮನೆಗೆ ಬ೦ದು ಅಮ್ಮನನ್ನು ಮಾತನಾಡಿಸಿ, ನಮ್ಮ ಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ಕೆಲವು ವರುಷಗಳ ನ೦ತರ ನಾನು ಮತ್ತು ಅಮ್ಮ ಕೆಲವೊಮ್ಮೆ ನನ್ನ ತಮ್ಮ ಕೃಷ್ಣನೊಟ್ಟಿಗೆ ತಿರುನಾರಾಯಣಪುರಕ್ಕೆ ವೈರಮುಡಿಗೆ ಹೋಗುತ್ತಿದ್ದೆವು. ಸಾಯ೦ಕಾಲ ಹೊರಟು, ರಾತ್ರಿ ತಲುಪುತ್ತಿದ್ದೆವು. ನಮ್ಮನ್ನು ಕ೦ಡಾಗ, ಗೋದಾ ಮಾಮಿಗೆ ಆಗುತ್ತಿದ್ದ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಹೋದ ತಕ್ಷಣ ಗೋದಾ ಮಾಮಿ ಕೈ ಕಾಲು ತೊಳೆದು ಕೊಳ್ಳಿ.. ಊಟ ಮಾಡಿ ಎ೦ದು ಹೇಳುತ್ತಿದ್ದರು. ಅವರು ತೋರುತ್ತಿದ್ದ ಆ ಪ್ರೀತಿ, ಶುಶ್ರೂಷೆ ಎಂದೂ ಚಿರಾಯು... ನೂರಾರು ಜನಕ್ಕೆ ಊಟ ಉಪಚಾರ ಮಾಡುತ್ತಿದ್ದರು. ಬಂದವರೆಲ್ಲ ಚಾಮಿ ಮಾಮ ಮತ್ತು ಮಾಮಿಗೆ ನಮಸ್ಕರಿಸುತ್ತಿದ್ದರು. ಮಾಮ ಮತ್ತು ಮಾಮಿ, ಎಲ್ಲರನ್ನೂ ಪ್ರೀತಿಯಿಂದ ನಗುನಗುತ್ತಾ, ಆದರಿಸಿ ಆಶೀರ್ವದಿಸುವುದನ್ನು ನೋಡುವುದೇ ಸೊಬಗು. ನನ್ನನ್ನು ಕಂಡರೆ ಚಾಮಿ ಮಾಮ ಮತ್ತು ಮಾಮಿಗೆ ಅಪರಿಮಿತವಾದ ಪ್ರೀತಿ. ನನ್ನ ಪೂರ್ವ ಜನ್ಮ ಸುಕೃತ. ದೇವರಿಗೆ ವೈರಮುಡಿ ಧರಿಸುವ ಸಮಯಕ್ಕೆ ಮಾಮ ದೇವಸ್ಥಾನಕ್ಕೆ ಹೋಗುತ್ತಿದ್ದರು. ಮಾಮಿ ತಮ್ಮ ಆಯಾಸವನ್ನೂ ಲೆಕ್ಕಿಸಿದೆ, ಊರ್ಲೇನು ವಂದರ್ಕೆಂಗೋ ಆಯಾಸಂ ಆಯಿರ್ಕರ್ದ್..ಕೊಂಚುಮ್ ಪೋದ್ ತೂಂಗೆಂಗೋ (ಊರಿಂದ ಬಂದಿದ್ದೀರ, ಆಯಾಸ ಆಗಿರುತ್ತೆ ಸ್ವಲ್ಪ ಹೊತ್ತು ಮಲಗಿಕೊಳ್ಳಿ) ಎನ್ನುತ್ತಿದ್ದರು. ನಾನಂತು ಮಾಮಿಯ ಪಕ್ಕವೇ ಮಲಗುತಿದ್ದೆ. ದೇವರು ಮನೆಯ ಮುಂದೆ ಬಿಜಯ ಮಾಡುವಾಗ ಎಬ್ಬಿಸುತ್ತಿದ್ದರು. ಮರುದಿನ ಬೆಳಿಗ್ಗೆ ನಾನು ಮತ್ತು ಅಮ್ಮ ಹೊರಡುತ್ತಿದ್ದೆವು. ಆಮೇಲೆ ಅಮ್ಮ ಕೆಲಸಕ್ಕೆ ಕಾಲೇಜಿಗೆ ಹೊಗುತಿದ್ದರು. ನಾನು ಕಾಲೇಜಿಗೆ ಹೋಗುತ್ತಿದ್ದೆ.
ಪ್ರತಿಸಾರಿಯೂ ಊರಿಗೆ ಹೊರಡುವಾಗ, ಪ್ರತಿಬಾರಿಯೂ ಮಾಮಿ, ಅಮ್ಮನಿಗೆ ಇನ್ನೆರಡು ದಿನ ಇದ್ದು ಹೋಗಿ ಎನ್ನುವುದು, ಅಮ್ಮ ಮಕ್ಕಳನ್ನು ಬಿಟ್ಟು ಬಂದಿದ್ದೀನಿ ಎನ್ನುವುದು ಸಾಮಾನ್ಯವಾಗಿತ್ತು. ಸರಿ ಭಾಗ್ಯಶ್ರೀಯನ್ನಾದರೂ ಬಿಟ್ಟು ಹೋಗಬಾರದೇ ಅನ್ನುತಿದ್ದರು. ನಾನು ಅಮ್ಮ ಒಬ್ಬರೇ ಹೋಗುತ್ತಾರೆ ಮತ್ತು ಕಾಲೇಜು ಇರುತ್ತೇ ಅಂತ ಹೇಳಿ ಬಂದು ಬಿಡುತ್ತಿದ್ದೆ. ಒಂದು ಸಾರಿ ಅಮ್ಮ, ವಂದಪ್ಪೋ ಎಲ್ಲಾ ಶೋಲ್ರ ಇರುಂದುಟ್ ವಾ..ಅವಾಲಕ್ಕುಮ್ ಸಂತೋಷಂ ಆರ್ದ್ (ಬಂದಾಗಲೆಲ್ಲ ಹೇಳುತ್ತಾರೆ ಇದ್ದು ಬಿಟ್ಟು ಬಾ. ಅವರಿಗೂ ಸಂತೋಷ ವಾಗುತ್ತೆ) ಅಂದುಬಿಡೋದಾ? ನನಗೋ ಒಳಗೇ ಖುಷಿ. ಸರಿ ಉಳಿದುಬಿಟ್ಟೆ. ಅಂದು ಮಾಮಿ ಕಡೆಯಿಂದ ಎಣ್ಣೆ ಸ್ನಾನ. ಮಾಮ ದೇವರಿಗೆ ಮಾಡುವ ತಿರುವಾರಾಧನ ನೋಡುವ, ಮಾಮನೊಟ್ಟಿಗೆ ಕುಳಿತು ಊಟ ಮಾಡುವ ಸೌಭಾಗ್ಯ ನನ್ನದಾಯಿತು. ಮಾಮಿ ಹತ್ತಿರ ಹರಟೆ ಹೊಡೆಯುತ್ತಿದ್ದೆ. ಮಾಮ ಬಂದು ಬಾ ಅಕಾಡೆಮಿಗೆ ಹೋಗಿ ಬರೋಣ ಎಂದರು. ಸರಿ ಎಂದು ಹೊರಟೆ. ಅಕಾಡೆಮಿಯಲ್ಲಿ ಸಂಗ್ರಹಿಸಿದ್ದ ತಾಳೆಗರಿಗಳು, ಅಲ್ಲಿನ ಕಾರ್ಯವೈಖರಿ, ಮಾಮನ ಆಡಳಿತ ವೈಖರಿ ನೋಡಿ ಬೆರಗಾಗಿ ಹೊದೆ. ಆಗ ನನಗೆ ಸುಮಾರು ೧೭ ರಿಂದ ೧೮ ವಯಸ್ಸು. ನನಗೆ ಅಲ್ಲಿ ನಡೆಯುತ್ತಿದ್ದ, ಮಹಾ ಕಾರ್ಯಗಳ, ಆಳ ಅಗಲ ಎಳ್ಳಷ್ಟೂ ತಿಳಿಯದಿದ್ದರೂ ನನ್ನ ಬಾಲಿಶ ಮನಸ್ಸಿಗೆ ಅನಿಸಿದ್ದು-ಮಾಮ ಎಷ್ಟೊಂದು ವಿಷಯ ತಿಳಿದುಕೊಂಡಿದ್ದಾರೆ ಎ೦ದು.
ನಾನು ಅಕಾಡೆಮಿಯಿಂದ ಬರುತ್ತಾ ಅದೇ ಸಹಜತೆಯಲ್ಲಿ ಮಾಮನ ಮತ್ತು ಅಪ್ಪನ ಸ್ನೇಹದ ಬಗ್ಗೆ ಕೇಳಿದೆ. ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು. "ಪಯ್ಯ (ನಮ್ಮ ತಂದೆಯನ್ನು ಅವರ ಸ್ನೇಹಿತರು, ಬಾಂಧವರು ಪ್ರೀತಿಯಿಂದ ಸಂಬೋಧಿಸುತ್ತಿದ್ದ ರೀತಿ) ಎನ್ ಆತ್ಮ ಸಖ. ಎಂಗ್ ಆತ್ಮ ಒನ್ನೆ. ಒಡಂಬು ವೇರೆ (ಪಯ್ಯ ನನ್ನ ಜೀವದ ಗೆಳೆಯ. ನಮ್ಮ ಜೀವ ಒಂದೇ. ಆದರೆ ದೇಹ ಬೇರೆ)ಎ೦ದರು. ನನಗೆ ಆ ಕ್ಷಣಕ್ಕೆ ನಾನು ಅವರ ಸ್ನೇಹದ ಬಗ್ಗೆ ಕೇಳಬಾರದಿತ್ತೇನೋ, ಕೇಳಿ ಅವರ ಹೃದಯದಲ್ಲಿ ಮಡುಗಟ್ಟಿದ್ದ ದುಃಖವನ್ನು ಹೆಚ್ಚಿಸಿದೆನೆನೋ ಎ೦ದು ಅನ್ನಿಸಿತು. ನಮ್ಮ ತ೦ದೆಯವರು ಮೃತರಾಗಿ ಎಷ್ಟೋ ವರುಷಗಳೇ ಕಳೆದರೂ ಅವರಲ್ಲಿ ದು:ಖ ಮಡುಗಟ್ಟಿತ್ತು. ನಮ್ಮ ತ೦ದೆಯವರು ದೈವವಶರಾಗಿ ದಶಮಾನಗಳೇ ಕಳೆದರೂ ನಮ್ಮ ಕುಟುಂಬದೊಂದಿಗೆ ಅದೇ ವಿಶ್ವಾಸದಿಂದ ಇಡೀ ಕುಟುಂಬದವರಿದ್ದರು. ಅಪ್ಪನಗಿಂತ ದೊಡ್ಡವರಿಗೆಲ್ಲ, ಅಮ್ಮ,ಪಯ್ಯಂಡೆ ಆಂಡ್ಯ (ಪಯ್ಯನ ಹೆಂಡತಿ) ಚಿಕ್ಕವರಿಗೆಲ್ಲ ಮನ್ನಿ (ಅತ್ತಿಗೆ) ಆಗಿದ್ದರು. ನಮ್ಮ ಮನೆಗೆ ಯಾವಾಗ ನೆಂಟರು ಬಂದರೂ, ಎಷ್ಟು ಹೊತ್ತಿಗೂ, ನಾವು ಮೇಲುಕೋಟೆಗೆ ಕರೆದು ಕೊಂಡು ಹೋಗುತ್ತಿದ್ದೆವು. ಅವರಿಗೆಲ್ಲ ಯಾವ ಸಮಯದಲ್ಲೂ ಮಾಮಿ ಭೋಜನ ವ್ಯವಸ್ಥೆ ಮಾಡುತಿದ್ದರು. ಅನಿರ್ವಚನೀಯವಾದ ಪ್ರೀತಿ, ಸೌಶೀಲ್ಯತೆ.
ನನ್ನ ಮದುವೆ, ಬಳೆ ತೊಡಿಸುವ ಶಾಸ್ತ್ರ, ನನ್ನ ತಮ್ಮಂದಿರ ಮದುವೆ, ನಮ್ಮ ಮನೆಯಲ್ಲಿ ನಡೆದ ಎಲ್ಲಾ ಶುಭ ಕಾರ್ಯಗಳಿಗೂ ಮಾಮ, ಮಾಮಿ ಎಷ್ಟೇ ಕಾರ್ಯನಿಮಿತ್ತವಿದ್ದರೂ, ಬಿಟ್ಟು ಕೊಡದೆ ಭಾಗವಹಿಸುತ್ತಿದ್ದರು. ನಮ್ಮ ತ೦ದೆಯವರನ್ನು ಕಂಡರೆ ಮಾಮನಿಗೆ ಮಾತ್ರವಲ್ಲ, ಅವರ ಸಹೋ ದರಿಯರು, ಮನೆಯ ಅಳಿಯಂದಿರಿಗೂ ಅಪಾರವಾದ ಪ್ರೀತಿ, ಗೌರವ. ಮಾಮ ಮಾಮಿಯನ್ನು ನೋಡುತಿದ್ದರೆ ಲಕ್ಷ್ಮಿ ನಾರಾಯಣರಂತೆ ಅನಿಸುತಿತ್ತು. ನನಗ೦ತು ಗೋದಾ ಮಾಮಿ ಯಾವಾಗಲು ಹೀರೋಯಿನ್. ಒಂದು ಸಂಜೆ. SJCE ಕಾಲೇಜಿನ ECE ವಿಭಾಗಕ್ಕೆ ನಾನು ನಮ್ಮ HOD Dr. Sudhakar Samuel ಅವರನ್ನು ಭೇಟಿ ಮಾಡಲು ಹೋದೆ. ಒಳಗೆ ನೋಡಿದರೆ ಚಾಮಿ ಮಾಮ!. Artificial intelligence ಬಗ್ಗೆ ನಿರರ್ಗಳವಾಗಿ ಮಾತನ್ನಾಡುತ್ತಿದ್ದರು. ನನಗೆ ಆಶ್ಚರ್ಯವೋ ಆಶ್ಚರ್ಯ. ನನ್ನನ್ನು ನೋಡಿ ಮಾಮ ನೀ ಎನ್ನ ಇಂಗೆ (ನೀ ಏನು ಇಲ್ಲಿ) ಎಂದರು. ನಾನು ಇಲ್ಲೇ ಓದುತಿದ್ದೇನೆ ಎಂದು ಹೇಳಿದೆ. HOD ಗೆ ನನ್ನ ಸ್ನೇಹಿತನ ಮಗಳು ಎಂದು ಪರಿಚಯಿಸಿದರು. ಇದೂ ನನಗೆ ಹೆಮ್ಮೆಯ ಸಮಯ.
ಮೈಸೂರಿನ ಶಾರದವಿಲಾಸ ಶಿಕ್ಷಣ ಸಂಸ್ಥೆಯಲ್ಲಿ ಘಂಟಾವತಾರ ಚಲನಚಿತ್ರ ಪ್ರದರ್ಶನ. ಎಲ್ಲ ಸಂಘ ಸಂಸ್ಥೆಗಳೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸುವ ಹೊಣೆ ನನ್ನ ಮೇಲಿತ್ತು. ಚಾಮಿ ಮಾಮ ಅವರನ್ನು ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆವು. ಚಾಮಿ ಮಾಮ ಅವರು ಪ್ರದರ್ಶನ ಮುಗಿಯುವವರೆಗೆ ಇದ್ದು, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮನ್ನು ಹರಿಸಿದ್ದು ಅವರು ನಮ್ಮ ಮೇಲೆ ಇಟ್ಟ ಪ್ರೀತಿ ಅಭಿಮಾನಕ್ಕೆ ಸಾಕ್ಷಿ.
ನರತ್ವಂ ದುರ್ಲಭಂ ಲೋಕೇ ವಿದ್ಯಾ ತತ್ರ ಸುದುರ್ಲಭಾ ।
ಶೀಲಂ ಚ ದುರ್ಲಭಂ ತತ್ರ ವಿನಯಸ್ತತ್ರ ಸುದುರ್ಲಭಃ ॥
ಈ ಲೋಕದಲ್ಲಿ ಮಾನವ ಜನ್ಮವೇ ದುರ್ಲಭವಾದದ್ದು. ಅದರಲ್ಲೂ ವಿದ್ಯೆ ಜ್ಞಾನ ದೊರಕುವುದು ಇನ್ನೂ ದುರ್ಲಭ. ಅದೂ ದೊರೆತು ಶೀಲವಂತನಾಗಿರುವುದು ಮತ್ತೂ ದುರ್ಲಭವಾದದ್ದು. ಇವೆಲ್ಲವೂ ಇದ್ದು ವಿನಯದಿಂದ ಕೂಡಿರುವುದು ಅತಿ ದುರ್ಲಭವು.
ಆಂಡಾಲ್ ಮಂದಿರದಲ್ಲಿ ತಿರುಪ್ಪಾವೈ ಡಾ. ಆಳ್ವಾರ್ ರವರ ಉಪನ್ಯಾಸ ಸಂದರ್ಭ, ಹೈದರಾಬಾದ್ ನಲ್ಲಿ ಪೂರ್ವ ನಿಯೋಜಿತವಾಗಿದ್ದ ಯಾವುದೋ ಕಾರ್ಯಕ್ರಮದ ಪ್ರಯುಕ್ತ ಆಳ್ವಾರ್ ರವರ ಅನುಪಸ್ಥಿತಿಯಲ್ಲಿ ಚಾಮಿ ಮಾಮ ಅವರ ಉಪನ್ಯಾಸ. ಆ ಉಪನ್ಯಾಸಕ್ಕೆ ನಮ್ಮ ತಾಯಿಯವರು ಬಂದಿದ್ದರು. ವಿದ್ವತ್ಪೂರ್ಣ ಉಪನ್ಯಾಸ. ನಾನು ಮೊದಲನೆಯ ಸಾಲಿನಲ್ಲಿ ಕೂತಿರುತ್ತಿದ್ದೆ. ನನಗೆ ಚಾಮಿ ಮಾಮ ಅವರಿಗೆ ಏನಾದರೂ ಸಮರ್ಪಿಸಬೇಕು ಎಂದು ಆಸೆ. ನಮ್ಮ ತಂದೆಯವರ ಹತ್ತಿರ ಒಂದು ಕೆಂಪು ಬಣ್ಣದ ಶಾಲು ಇತ್ತು. ನಾನು ಮಾಮನಿಗೆ ಅದೇ ಬಣ್ಣದ, ಅಂತಹದೇ ಒಂದು ಶಾಲನ್ನು ಸಮರ್ಪಿಸಿ ಹೇಳಿದೆ “ ಮಾಮ ಒಂಗಲೆಕ್ ಇದು ಇಷ್ಟಮ್ ಆರ್ದಾಕುಮ್. ಅಪ್ಪ ಕಿಟ್ಟೆ ಇದೇ ಮಾದ್ರಿ ಶಾಲು ಇರೆಂದೆದು”( ಮಾಮ ನಿಮಗೆ ಇಷ್ಟ ಆಗುತ್ತೆ ಅಂತ ಅಂದ್ಕೋತೀನಿ. ಅಪ್ಪ ಹತ್ತಿರ ಇದೇ ರೀತಿಯ ಶಾಲು ಇತ್ತು) ಚಾಮಿ ಮಾಮ ನಗುತ್ತಾ ಕೇಳಿದರು “ನೀ ಕೊಂಡ್ವಂದರ್ಕ್ಕೆ.. ನನ್ನಾವೆ ಇರ್ಕುರ್ದು ( ನೀನು ತಂದಿದ್ದೀಯ, ಚೆನ್ನಾಗಿಯೇ ಇರುತ್ತದೆ). ಇದು ಅವರಿಗೆ ನಮ್ಮಲಿದ್ದ ಅತಿಶಯವಾದ ಪ್ರೀತಿಯ ಕುರುಹು.
ನಮ್ಮ ಮೈಸೂರು ಅಹೋಬಿಲ ಮಠದಿಂದ ಕೆಲವು ಉಪನ್ಯಾಸ ಮಾಲಿಕೆಗಳನ್ನು ನಡೆಸಿದೆವು. ನಮ್ಮ ಮೈಸೂರು ಅಹೋಬಿಲ ಮಠದ ಅಧ್ಯಕ್ಷರಾದ ಡಾ. ವಿಜಯ ರಾಘವನ್ ರವರಿಗೆ ಚಾಮಿ ಮಾಮ ಎಂದರೆ ಬಹಳ ಆದರ, ಗೌರವ. ಆ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮದ ನಿರ್ವಹಿಸುವ ಸೌಭಾಗ್ಯ ನನ್ನದಾಗಿತ್ತು. ಮಾಮ ಅವರ ವಿಷಯ ನಿರೂಪಣೆ, ಕೊಡುತಿದ್ದ ವಿವರಣೆಗಳು, ಮನಸ್ಸಿಗೆ ತಟ್ಟುವಂತೆ ಹೇಳುವ ಪರಿ. ಚಾಮಿ ಮಾಮ, ಅವರ ಉಪನ್ಯಾಸದಲ್ಲಿ, ಆಳ್ವಾರ್, ಆಚಾರ್ಯರು, ಕಾದಂಬರಿಕಾರರು, ತತ್ವ ಜ್ಞಾನಿಗಳು, ಕವಿಗಳು, ಸಂಗೀತ ವಾಗ್ಗೇಯಕಾರರು, ವಿಜ್ಞಾನಿಗಳು ಇವರೆಲ್ಲರ ಉಲ್ಲೇಖಗಳನ್ನು ಸಮಯಕ್ಕೆ ಸರಿಯಾಗಿ, ಸಂದರ್ಭೋಚಿತವಾಗಿ ಉಲ್ಲೇಖಿಸುತ್ತಿದ್ದರು. ಇಷ್ಟೆಲ್ಲ ವಿಷಯ ಸಂಗ್ರಹಣೆ, ಅದನ್ನು ಚಿನ್ನದ ದಾರದಲ್ಲಿ ನವರತ್ನಗಳಂತೆ ವಿವಿಧ ವಿಚಾರಧಾರೆಗಳನ್ನು ಪೋಣಿಸಿ ಶ್ರೋತೃವಿಗೆ ಮನಸ್ಸಿಗೆ ನಾಟುವಂತೆ, ಚಿಂತನೆಗೆ ಒರೆ ಹಚ್ಚುವಂತೆ ಹೇಳುವ ಪರಿ “ಚಾಮಿ ಮಾಮನಿಗೆ ಚಾಮಿ ಮಾಮಾನೇ ಸಾಟಿ”.
ಚಾಮಿ ಮಾಮ ಅವರ ಪಾಂಡಿತ್ಯ, ವಿದ್ವತ್ ಎಲ್ಲಕ್ಕೂ ಮೀರಿ ಅವರು ನಮ್ಮ ತಂದೆಯಲ್ಲಿ ಇಟ್ಟಿದ್ದ ಅಗಾಧವಾದ ಪ್ರೀತಿ, ಸ್ನೇಹಿತ ಹೋಗಿ ದಶಮಾನಗಳೇ ಆದರೂ ಅವನ ಕುಟುಂಬವನ್ನು ತನ್ನ ಕೊನೆಯುಸಿರು ಇರುವವರೆಗೆ ಅದೇ ಸ್ನೇಹ ವಿಶ್ವಾಸದಿಂದ ಕಂಡ ಮಮಕಾರಕ್ಕೆ ಬೆಲೆ ಕಟ್ಟಲಾದೀತೆ? ಹಲವು ಭಾರಿ ನನಗೆ ಮಾಮ ಹೇಳಿದ್ದುಂಟು ನಿನ್ನ ಬಳಿ ಕಾರ್ ಇದೆ, ಡ್ರೈವಿಂಗ್ ಬರುತ್ತೆ, ರಿಸರ್ಚ್ ಮಾಡಲು ಬೇಕಾದ ಕ್ವಾಲಿಟಿ ಇದೆ. ಮನಸ್ಸು ಮಾಡಿ ಮೇಲುಕೋಟೆಗೆ ಬರುತ್ತಿರು. ರಿಸರ್ಚ್ನಲ್ಲಿ ತೊಡಗಿಸಿಕೊ ಎಂದು. ನಾನು ನನ್ನದೇ ಪರಿಮಿತಿಯಲ್ಲಿದ್ದೇನೆನೋ ಅನಿಸುತ್ತದೆ. ಇದನ್ನು ಬರೆಯ ಬೇಕಾದರೆ, ಎಂತಹ ಮಹನೀಯರನ್ನು, ಆತ್ಮವತ್ ಸರ್ವ ಭೂತಾನಿ ಎಂಬಂತೆ ಮಮತೆಯನ್ನು ಧಾರೆಯೆರೆದ ಮಹನೀಯರನ್ನು ಕಳೆದು ಕೊಂಡೆವಲ್ಲ ಎಂದು ನೆನೆದಾಗ ಕಣ್ತುಂಬಿ ಬರುತ್ತದೆ. ಆದರೆ, ನಿಶ್ಚಿತವಾದದ್ದನ್ನು ಒಪ್ಪಲೇ ಬೇಕಲ್ಲಾ ...? ಅಪ್ಪ, ಕೋಲೆರಾಜು ಮಾಮ, ಚಾಮಿ ಮಾಮ, ಆತ್ಮಸಖರು ವೈಕುಂಠದಲ್ಲಿ ಒಟ್ಟಿಗೆ ಇದ್ದಾರೇನೋ ಅನಿಸುತ್ತದೆ. ಸ್ನೇಹಭಾವಕ್ಕೆ ಸಾವಿಲ್ಲ ಅಲ್ಲವೆ? ಚಾಮಿ ಮಾಮ, ನಿಮಗೆ ನನ್ನ ಅನ೦ತಾನ೦ತ ನಮನ |