ಕನಸಿನ ಕುದುರೆಯನ್ನು ಏರಿಯೇ ಹೋದ ಲಕ್ಷ್ಮೀ ತಾತಾಚಾರ್
ಸಂಸ್ಕೃತ ಸಂಶೋಧನಾ ಸಂಸತ್ ನ ಮೊದಲ ಪ್ರಕಟಣೆ 'ಈಶಾವಾಸೋಪನಿಷತ್' ಮುದ್ರಣ ನಮ್ಮ ಸಂಸ್ಥೆಯ ಹಳೆಯ ಕಾಲದ ಮೊಳೆ ಜೋಡಿಸುವ ಮುದ್ರಣಾಲಯದಲ್ಲಿ ನಡೆಯುತ್ತಿತ್ತು. ಆಗಿನ ಕಾಲದ ಹಳೆಯ ಸಿಲಿಂಡರ್ ಯಂತ್ರದಲ್ಲಿ ಮುದ್ರಣ. ಆ ತಂತ್ರಜ್ಞಾನಕ್ಕೆ ಅನೇಕ ಇತಿ ಮಿತಗಳಿದ್ದವು. ಆ ತಂತ್ರಜ್ಞಾನದಲ್ಲೇ ಆ ಪುಸ್ತಕವನ್ನು ಮುದ್ರಿಸಿದೆವು. ಮುದ್ರಣ ಸಮಯದಲ್ಲಿ ತಾತಾಚಾರ್ ಅವರು ನಮ್ಮಲ್ಲಿಗೆ ಬಂದು ನನ್ನ ಅಪ್ಪನ ಜೊತೆ ತಾಸು ತಾಸು ಮಾತನಾಡುತ್ತಿದ್ದರು. ಇಬ್ಬರು ಕನಸುಗಾರರು ಸೇರಿದರೆ ಅವರ ಲೋಕವೇ ಬೇರೆ! ಆ ಸಮಯದಲ್ಲಿ ತಾತಾಚಾರ್ ಅವರೊಂದಿಗೆ ನನ್ನ ಒಡನಾಟವೂ ಬೆಳೆಯಿತು. ಆ ನಂತರ ಅವರ ಸಾಹಸಗಳನ್ನೆಲ್ಲಾ ನಾನು ನೋಡುತ್ತಾ ಬೆಳೆದೆ. ತಾತಾಚಾರ್ ಅವರು ನಮ್ಮನ್ನು ಅಗಲಿ ಮೂರು ವರ್ಷ ಕಳೆದು ಹೋಗಿದೆ. ಮೇಲುಕೋಟೆಯ ರಾಜಬೀದಿಯಲ್ಲಿ ನಡೆದು ಹೋಗವಾಗೆಲ್ಲಾ ಅವರ ಮನೆಯ ಕಡೆ ತಿರುಗಿ ನೋಡುತ್ತೇನೆ. ಒಳಗಡೆ ತಾತಾಚಾರ್ ಅವರು ತಮ್ಮ ಆರಾಮ ಕುರ್ಚಿಯಲ್ಲಿ ಕುಳಿತಿರಬಹುದೇ? ಮಾಮೂಲಿನಂತೆ ಅತಿಥಿಗಳು ಇದ್ದಾರೆಯೇ? ನನ್ನನ್ನು ಕಂಡು ಹೊರಬಂದು ಒಳಗೆ ಕರೆಯಬಹುದೇ ಎನಿಸುತ್ತದೆ. ಒಳ ಕೋಣೆಯಿಂದ ಮಡಿಶಾಲು ಉಟ್ಟ ಆ ಸುಂದರಾಂಗನ ಸ್ಪುರದ್ರೂಪಿ ಮಡದಿ ಗೋದಾ ಮಾಮಿ ಹೊರಬಂದು ಈಗ ಮಾತನಾಡಿಸುತ್ತಾರೆ ಎನಿಸುತ್ತದೆ. ಆದರೆ ಎಲ್ಲವೂ ಕನಸು. ರಾಜಬೀದಿ ಬಿಕೋ ಎನ್ನುತ್ತಿದೆ.
ತಾತಾಚಾರ್ ಅವರು ತೀರಿಹೋದಾಗ ದು:ಖದಲ್ಲಿ ಬರೆದ ಪುಟ್ಟ ಬರಹವೊಂದು ಈ ಸಂಸ್ಮರಣ ಸಂಚಿಕೆಯಲ್ಲಿ ಸೇರಿದೆ ಎಂಬುದೇ ತಾತಾಚಾರ್ ಅವರು ನನ್ನ ಮೇಲೆ ಪ್ರೀತಿ ಮತ್ತು ಅಭಿಮಾನ ಇಟ್ಟಿದ್ದರು ಎಂಬುದಕ್ಕೆ ಸಾಕ್ಷಿ. ಆ ಬರಹ ಈ ಕೆಳಗಿನಂತಿದೆ.
As written in a facebook post on 15.05.2021:
ನಾನು ಸಣ್ಣವನಾಗಿ ಮೊದಲ ಬಾರಿಗೆ 'ಲಕ್ಷ್ಮೀ ತಾತಾಚಾರ್” ಎಂಬ ಹೆಸರನ್ನು ಕೇಳಿದಾಗ ಇದು ಯಾವುದೋ ಹೆಂಗಸಿನ ಹೆಸರು ಎಂದು ಭಾವಿಸಿದ್ದೆ. ಆ ಹೆಸರು ಕೇಳಿದ ಎಷ್ಟೋ ವರ್ಷಗಳ ನಂತರ ನಾನು ಅವರನ್ನು ಮೊದಲ ಬಾರಿ ಕಂಡಿದ್ದೆ. ನಾನು ಅವರನ್ನು ಮೊದಲ ಬಾರಿ ಕಂಡಾಗ ಅವರಿಗೆ ಸುಮಾರು ೪೦ ವರ್ಷದ ಪ್ರಾಯ ಇರಬಹದು. ಆಕರ್ಷಕ ಮೈಕಟ್ಟಿನ, ಎತ್ತರದ ನಿಲುವಿನ, ಸುಂದರಾಂಗ ಲಕ್ಷ್ಮೀತಾತಾಚಾರ್. ಅವರು ತೊಡುತ್ತಿದ್ದ ಕಚ್ಚೆ ಪಂಚೆ, ಜುಟ್ಟು, ಹಣೆಯಲ್ಲಿ ನಾಮ , ಅವರನ್ನೂ ಇನ್ನೂ ಆಕರ್ಷಕವಾಗಿ ಮಾಡಿತ್ತು. ಅವರ ಹಾವ ಭಾವ, ಅವರ ದನಿ ಮತ್ತು ಅವರು ಯೋಚಿಸಿ ಬಳಸುತ್ತಿದ್ದ ಶಬ್ದಗಳು, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯ ಮೇಲಿನ ಪ್ರಭುತ್ವ ಮತ್ತು ವೇದ ಉಪನಿಷತ್ತುಗಳ ಓದು, ವಿಶಿಷ್ಟಾದ್ವೈತದ ಜ್ಞಾನ ಇವೆಲ್ಲವೂ ನನ್ನನ್ನು ಮೋಡಿ ಮಾಡಿತ್ತು.ಒಟ್ಟಾರೆ ಹತ್ತು ಜನರ ನಡುವೆ ಎದ್ದು ಕಾಣುವ ವ್ಯಕ್ತಿತ್ವ ಅವರದು.
ಅವರು ಮೇಲುಕೋಟೆಯಲ್ಲಿ ಸಂಸ್ಖೃತ ಸಂಶೋಧನಾ ಸಂಸತ್ ಮುನ್ನಡೆಸಲು ಬಂದಾಗ ನಾನು ಇನ್ನೂ ಬೆಂಗಳೂರಿನಲ್ಲಿದ್ದೆ. ಸಂಶೋಧನಾ ಸಂಸತ್ ಪ್ರಾರಂಭವಾದ ಕೆಲವು ವರ್ಷಗಳ ನಂತರ ನಾನು ಮೇಲುಕೋಟೆಗೆ ಹಿಂದಿರುಗಿದ್ದೆ. ಅಂದಿನಿಂದ ಅವರೊಡನೆ ನನಗೊಂದಿಷ್ಟು ಒಡನಾಟ. ಹಲವು ಸಮಾನ ಆಸಕ್ತಿಗಳ ಕಾರಣಕ್ಕಾಗಿ ಭೇಟಿಯಾದಾಗ ಬಹಳ ಸಮಯ ಮಾತನಾಡುತ್ತಿದ್ದೆವು. ಅವರ ಶ್ರೀಮತಿ ಗೋದಾ ಅವರು ನನ್ನ ಅಮ್ಮ ನಡೆಸುತ್ತಿದ್ದ ಶಿಶುವಿಹಾರದ (೧೯೬೦?) ವಿದ್ಯಾರ್ಥಿನಿ. ಮನೆಯಿಂದ ಹೆಚ್ಚು ಹೊರಗೆ ಕಾಣಿಸಿಕೊಳ್ಳದಿದ್ದ ಗೋದಾ ಅವರು ಎಂದೋ ಒಮ್ಮೆ ಭೇಟಿಯಾದಾಗ ಮೇಡಂ ಹೇಗಿದ್ದಾರೆ? ಎಂದು ಕೇಳುತ್ತಿದ್ದರು. ತಮ್ಮ ಬಾಲ್ಯದ ಕೆಲವು ಸಂತೋಷದ ಘಳಿಗೆಗಳನ್ನು ನೆನೆಯುತ್ತಿದ್ದರು.
ತಾತಾಚಾರ್ ಅವರಿಗೂ ನನಗೂ ಇದ್ದ ಸಮಾನ ಆಸಕ್ತಿ ಗಿಡ-ಮರ, ತೋಟ, ಪ್ರಾಣಿ-ಪಕ್ಷಿ. ನಮ್ಮ ಮಾತು ಯಾವಾಗಲೂ ಇವುಗಳ ಸುತ್ತಲೇ.
ಅವರು ಸಂಶೋಧನಾ ಸಂಸತ್‌ನ ತಾಳೆಗರಿ ಹಸ್ತ ಪ್ರತಿಗಳ ಸಂಗ್ರಹ ಅತ್ಯಂತ ವಿಶಿಷ್ಟವಾದುದು. ಅವುಗಳ ಸಂರಕ್ಷಣೆಗೆ ಮತ್ತು ಅವುಗಳ ಡಿಜಿಟಲೀಕರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸ ತೊಡಗಿದ್ದು ನನಗೆ ವಿಶೇಷವಾಗಿ ಕಂಡಿತ್ತು. ಮೊದಲ ಬಾರಿಗೆ ಮೌಸ್ ಬಳಸಿ ಕಂಪ್ಯೂಟರ್ ನಿಯಂತ್ರಿಸುವ ತಂತ್ರಜ್ಙಾನವನ್ನು ನೋಡಿದ್ದು ಸಂಶೋಧನಾ ಸಂಸತ್ ನಲ್ಲಿ. ಸಂಶೋಧನಾ ಸಂಸತ್ ನ ನೀಲಿನಕ್ಷೆಯ ಒಂದು ದೊಡ್ಡ ಪಟ ಅವರ ಕಛೇರಿಯಲ್ಲಿ ಅವರ ಕುರ್ಚಿಯ ಹಿಂದಿನ ಗೋಡೆಗೆ ನೇತು ಬಿದ್ದಿತ್ತು. ಅ ನೀಲಿ ನಕ್ಷೆಯನ್ನು ತೋರಿಸಿ ಮುಂದಿನ ಹತ್ತು ವರ್ಷಗಳಲ್ಲಿ ಸಂಸೋಧನಾ ಸಂಸತ್ ಹೇಗೆ ಕಾಣುತ್ತದೆ ಎಂಬುದನ್ನು ಕನಸು ತುಂಬಿದ ಕಣ್ಣುಗಳಿಂದ ಅವರು ವಿವರಿಸುವಾಗ ಅವರ ಆತ್ಮ ವಿಶ್ವಾಸ ಎದ್ದು ಕಾಣುತ್ತಿತ್ತು. ನಕ್ಷತ್ರ ಕೊಳ, ಪಂಡಿತರು ಉಳಿಯಲು ಅಗ್ರಹಾರದ ಮಾದರಿಯ ಕಟ್ಟಡಗಳು, ಪುರಾಣಗಳಲ್ಲಿ ಬರುವ ಗಿಡಗಳ ಸಂಗ್ರಹ, ಕಂಪ್ಯೂಟರ್, ಮುದ್ರಣ, ವೇದ ಉಪನಿಷತ್ತು, ಉಪನ್ಯಾಸ ಹೀಗೆ ಒಂದೇ? ಎರಡೇ? ಹತ್ತು ಹಲವಾರು ಅವರ ಆಸಕ್ತಿಯ ಕ್ಷೇತ್ರಗಳು.
ಅವರಿಗೆ ಇವೆಲ್ಲಕ್ಕೂ ಒಂದು ಸಂಬಂಧ ಕಲ್ಪಿಸುವ ಶಕ್ತಿಯಿತ್ತು. ಅವುಗಳ ನಡುವೆ ಕನಸಿನ ಒಂದು ಕೊಂಡಿಯನ್ನು ಪೋಣಿಸುವ ಗುಣವಿತ್ತು. ಬಹಳ ಸಲ ಅವರೊಂದಿಗೆ ಇದ್ದವರಿಗೆ ಈ ಸಂಬಂಧಗಳು ಅರ್ಥವಾಗುತ್ತಿರಲಿಲ್ಲ. ಆ ಕನಸು ಅವರ್ಯಾರಿಗೂ ಇರುತ್ತಿರಲಿಲ್ಲ. ಹಾಗಾಗಿ ಅನೇಕ ಬಾರಿ ಇವರು ವಿಚಿತ್ರವಾಗಿ ಅವರು ಕನಸುಗಳು ತಿಕ್ಕಲುತನದ ಪರಮಾವಧಿಯಾಗಿ ಅವರಿಗೆ ಕಾಣುತ್ತಿತ್ತು. ಹಾಗಾಗಿ ಹಲವರಿಗೆ ಅವರು ಸಹಿಸಿಕೊಳ್ಳಲಾಗದ ವ್ಯಕ್ತಿಯಾಗಿ ಕಾಣುತ್ತಿದ್ದರು. ಅವರಿಗೂ ಸಹ ಅವರ ಕನಸಿನ ಹಿಂದೆ ಓಡಲಾಗದವರನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಅದು ಘರ್ಷಣೆಗೆ ಎಡೆ ಮಾಡಿಕೊಡುತ್ತಿತ್ತು. ಹಠ ಅವರ ಬದುಕಿನ ಭಾಗವಾಗಿತ್ತು. ಒಮ್ಮೆ ಕುದುರೆ ಓಡಿಸಲು ಹೋಗಿ ಕೆಳಗೆ ಬಿದ್ದು ಕಾಲು ಮುರಿದು ಕೊಂಡಾಗ ಅವರ ಕನಸಿನ ಕಟ್ಟಡವೊಂದು ಸಂಸತ್ನಲ್ಲಿ ತಲೆ ಏಳುತ್ತಿತ್ತು. ಕಾಲಿಗೆ ಪಟ್ಟಿ ಕಟ್ಟಿಸಿಕೊಂಡು ಎತ್ತಿನಗಾಡಿಯ ಮೇಲೆ ಇಡೀ ದಿನ ಕುಳಿತುಕೊಂಡು ವಾರ ಗಟ್ಟಲೆ ಕೆಲಸದ ಉಸ್ತುವಾರಿ ಮಾಡಿದ್ದನ್ನು ನೋಡಿ, ನಾನು ಉಸ್ಸಪ್ಪ ಎಂದಿದ್ದೇನೆ . ಸಂಸತ್‌ನ ಕ್ಯಾಂಪಸ್ ಗೆ ರೂಪ ಕೊಡಲು ಇತ್ತ ಆ ಬಂಡೆಗಳನ್ನು ಇಲ್ಲಿಗೆ ತಳ್ಳಿಸುತ್ತಾ, ಈ ಬಂಡೆಯನ್ನು ಅತ್ತ ತಳ್ಳುತ್ತಾ, ಎಲ್ಲೆಲ್ಲೂ ಸಿಕ್ಕ ಗಿಡ ಮರಗಳನ್ನು ತಂದು ಅಲ್ಲಿ ನೆಡುತ್ತಾ, ಅತ್ತ ಸಂಶೋಧನೆಯನ್ನೂ ಮಾಡುತ್ತಾ, ಪುಸ್ತಕವನ್ನು ಪ್ರಕಾಶಿಸುತ್ತಾ, ವಿಚಾರ ಸಂಕಿರಣಗಳನ್ನು ನಡೆಸುತ್ತಾ, ಜಿ .ವಿ. ಅಯ್ಯರ್ ಅವರನ್ನು ಹಿಡಿದು ರಾಮಾನುಜರ ಮೇಲೆ ಸಿನೆಮಾ ಮಾಡಿಸುತ್ತಾ ಅದರಲ್ಲಿ ತಾನೇ ರಾಮಾನುಜರ ಪಾತ್ರ ಮಾಡುತ್ತಾ…. ಒಂದೇ? ಎರಡೇ? ಅವರ ಕನಸಿನ ಕುದುರೆಗೆ ದಣಿವೇ ಇಲ್ಲವೇನೋ ಎಂದು ನನಗೆ ಹಲವು ಬಾರಿ ಅನ್ನಿಸಿದೆ. ತಮ್ಮ ಹಟಮಾರಿ ತನದಿಂದಾಗಿ ವಿರೋಧಗಳ ನಡುವೆಯೇ ಬದುಕುವ ಅವರ ಗುಣ ನನಗೆ ಸದಾ ವಿಸ್ಮಯ ಉಂಟುಮಾಡಿದೆ. ಬಹಳ ಸಲ ಅವರಿಗೆ ನಿದ್ದೆ ಹೇಗೆ ಬರುತ್ತದೆ? ಎಂದು ಸೋಜಿಗ ನನಗೆ ಉಂಟಾಗಿದೆ.
ಗೋದಾ ಅವರು ಕೆಲವು ವರ್ಷಗಳ ಹಿಂದೆ ಅವರನ್ನು ತೊರೆದು ಹೋದ ಮೇಲೆ ಅವರ ಉತ್ಸಾಹ ಕಡಿಮೆಯಾಗತೊಡಗಿದ್ದು, ಅವರ ಕನಸಿನ ಕುದುರೆಯ ವೇಗ ಕಡಿಮೆಯಾಗಿದ್ದನ್ನು ನಾನು ಗಮನಿಸದ್ದೇನೆ. ಸಂಸ್ಕೃತ ಸಂಶೋಧನಾ ಸಂಸತ್ತಿನಿಂದ ಹೊರ ಬಂದ ಮೇಲೆ ಅವರಿಗೆ ತಮ್ಮ ಕನಸುಗಳಿಗೆ ಸ್ಪಷ್ಟ ರೂಪ ಕೊಡಲು ಸಾಧ್ಯವಾಗದೇ ಒದ್ದಾಡುತ್ತಿದ್ದದ್ದನ್ನು ಕಂಡಿದ್ದೇನೆ.
ತಮ್ಮ ಹಳೆಯ ಕಾರಿನಲ್ಲಿ ಒಂಟಿಯಾಗಿ ಹೋಗಿ, ತಮ್ಮ ಸ್ವಂತ ಭೂಮಿಯನ್ನು ಸಮತಟ್ಟು ಮಾಡಿಸುತ್ತಾ, ಅಲ್ಲೊಂದು ಇಲ್ಲೊಂದು ಗಿಡ ನೆಡುತ್ತಾ , ಮನೆಯಲ್ಲಿ ಸಾಕಿದ್ದ ಹಸುಗಳಿಗಾಗಿ ಕಾರಿನ ಮೇಲೆ ಹುಲ್ಲು ಕಟ್ಟಿ ತರುತ್ತಿದ್ದ ಅವರನ್ನು ನೋಡುತ್ತಿದ್ದಾಗ ಏಕೆ ಇವರು ಕಷ್ಟ ಪಡುತ್ತಿದ್ದಾರೆ ಎನಿಸುತ್ತಿತ್ತು. ಅವರಿಗೆ ಒಂಟಿತನ ಕಾಡುತ್ತಿರುವುದು ಕಾಣುತ್ತಿತ್ತು. ಸುಸ್ತಾದಂತೆ ಕಾಣುತ್ತಿತ್ತು. ಅವರ ಕನಸಿನ ಕುದುರೆಯ ವೇಗ ತಗ್ಗಿತ್ತು.
೧೯೯೯ ರಲ್ಲಿ ಖ್ಯಾತ ಛಾಯಾಚಿತ್ರಗಾರ ಟಿ.ಎಸ್ ಸತ್ಯನ್ ಅವರನ್ನು ಸಂ ಸಂ ಸಂ ಗೆ ಕರೆದೊಯ್ದಿದ್ದೆ. ತಾತಾಚಾರ್ ಅವರು ತಮ್ಮ ಸಂಸ್ಥೆಯನ್ನು ಮಾಮೂಲು ಉತ್ಸಾಹದಿಂದ ತೋರಿಸಿದರು. ತಾವು ಸಾಕಿರುವ ಹಸುಗಳು, ಗಿಡಗಳು, ಸಂಶೋಧನೆ, ಕಂಪ್ಯೂಟರ್ ತಂತ್ರಜ್ಞಾನ ಎಲ್ಲವನ್ನೂ ಗಂಟೆಗಟ್ಟಲೆ ತೋರಿಸಿದರು. ಅವೆಲ್ಲವನ್ನೂ ಉತ್ಸಾಹದಿಂದ ಸತ್ಯನ್ ನೋಡಿದರು. ತಾತಾಚಾರ್ ಅವರು ಪರಂಪರೆಯನ್ನೂ ಆಧುನಿಕತೆಯನ್ನೂ ಹತ್ತಿರಕ್ಕೆ ತರಲು ಮಾಡುತ್ತಿರುವ ಪ್ರಯತ್ನಕ್ಕೆ ಮಾರು ಹೋದರು. “ಇವರದೊಂದು ಫೋಟೋ ಸೆಶನ್ ಮಾಡೋಣ ಕಣಯ್ಯಾ” ಎನ್ನುತ್ತಾ ಅವರ ಅನುಮತಿ ಪಡೆದರು. ಅಲ್ಲೇ ಇದ್ದ ರೋಣ ಕಲ್ಲಿನ ಮೇಲೆ ತಾತಾಚಾರ್ ಅವರನ್ನು ಅವರ ಲ್ಯಾಪ್ ಟಾಪ್ ಹಿಡಿದು ಕೂರಿಸಿದರು. ಅವರು ಸಾಕಿದ್ದ ನಾಟಿ ಹಸುಗಳನ್ನು ಪಕ್ಕದಲ್ಲಿ ಕಟ್ಟಿಸಿದರು. ಒಳ್ಳೆಯ ಬೆಳಕು ಬಂದ ತಕ್ಷಣ ಕಪ್ಪು ಬಿಳುಪಿನ ಫೋಟೋ ತೆಗೆದರು. ಅತ್ಯಧ್ಭುತವಾದ ಫೋಟೋ ಅದಾಗಿತ್ತು. ಅದು ತಾತಾಚಾರ್ ಅವರ ವ್ಯಕ್ತಿತ್ವನ್ನು ಸರಿಯಾಗಿ ಪ್ರತಿನಿಧಿಸುತ್ತಿತ್ತು.
ಕಳೆದ ವಾರವಷ್ಠೇ ರಸ್ತೆಯಲ್ಲಿ ಎರಡು ನಿಮಿಷ ಅವರೊಂದಿಗೆ ಮಾತನಾಡಿದ್ದೆ. ಇಂದು ಬೆಳಿಗ್ಗೆ ತಾತಾಚಾರ್ ಅವರು ಇಲ್ಲ ಎಂಬ ಸುದ್ದಿ ಬಂದಾಗ ಅವರು ತಮ್ಮ ಕನಸಿನ ಕುದುರೆ ಏರಿ ಆತುರಾತುರವಾಗಿ ಹೊರಟು ಹೋದರಲ್ಲಾ ಎಂದು ಎದೆ ಭಾರವಾಯಿತು.