ಎಂದರೋ ಮಹಾನುಭಾವುಲು ಅಂದರಿಕಿ ವಂದನಮು
ಶ್ರೀಮತೇ ರಾಮಾನುಜಾಯ ನಮಃ,
ಶ್ರೀಮದನಂತಾರ್ಯ ಗುರುವೇ ನಮಃ ॥
ನಮ್ಮ ಅತ್ಯಂತ ಪ್ರೀತಿಯ, ಪರಮ ಪೂಜ್ಯರೂ, ಆಚಾರ್ಯರೂ, ಮಹಾಮಹೋಪಾಧ್ಯಾಯರೂ ಆದ ತೀ। ಅಣ್ಣನವರ ಬಗ್ಗೆ ಒಂದು ಲೇಖನವನ್ನು ಬರೆಯಬಹುದೆಂದು ಹೇಳಿದಾಗ ನನಗೆ ಒಮ್ಮೆಲೇ ಆನಂದವೂ, ಭಯವೂ ಆಯಿತು. ಅಣ್ಣನವರೆಂದರೆ, ಎತ್ತರದಲ್ಲಿ ಒಂದು ಮೇರು ಪರ್ವತ, ಆಳದಲ್ಲಿ ಒಂದು ಮಹಾಸಾಗರ. ಅದ್ಭುತ ಸಾಧಕರು. ಅತ್ಯುನ್ನತ ವಿದ್ವಾಂಸರು. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಜಗತ್ತಿಗೆ ನಿರೂಪಿಸಿದವರು. ಸಂಸ್ಕೃತಭಾಷೆಯನ್ನು ಕಂಪ್ಯೂಟರ್ ಗೆ ಅಳವಡಿಸಿ, ಸಂಶೋಧನೆ ಮಾಡಿ ಅಂತರಾಷ್ಟ್ರೀಯ ಖ್ಯಾತಿ ಪಡೆದವರು. 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಾನ್ ಸಾಧಕರು. ಅಂತಹ ಮಹಾನ್ ವ್ಯಕ್ತಿಯನ್ನು ಅರ್ಥ ಮಾಡಿಕ್ಕೊಂಡು ಅವರ ಬಗ್ಗೆ ಬರೆಯಲು ಒಂದು ಸಣ್ಣ ಇರುವೆಯಂತಿರುವ ನನ್ನಿಂದ ಸಾಧ್ಯವೇ? ಆದರೂ ಇದೆಲ್ಲಕ್ಕಿಂತ ಮಿಗಿಲಾಗಿ ಅವರು ನನ್ನ ಪ್ರೀತಿಯ ಅಣ್ಣ ಅದೇ ನನಗೆ ಹೆಮ್ಮೆಯಲ್ಲವೇ? ಅವರ ಒಡನಾಟದಲ್ಲಿ ನನಗೆ ದಕ್ಕಿದ್ದನ್ನು ಬರೆಯಬಹುದೆಂಬ ಧೈರ್ಯ ಉಂಟಾಯಿತು. ಅದಕ್ಕೇ ಈ ಲೇಖನ.
ನಮ್ಮ ಅಣ್ಣನವರು ತ್ಯಾಗಮಯಿ. ತ್ಯಾಗಕ್ಕೆ ಉದಾಹರಣೆಯೇ ಅವರು. ಅವರು ಹುಟ್ಟಿದಾಗಲೇ ಅವರನ್ನು ಮುಂದಿನ ಗುರುಗಳೆಂದು ನಿರ್ಧರಿಸಿ (ಪಟ್ಟ ಕಟ್ಟಿ) ಅವರಿಗೆ ಶಿಸ್ತು, ಮಡಿ ಮುಂತಾದುವುಗಳನ್ನು ಹೇಳಿಕೊಟ್ಟು ಬೆಳೆಸಿದರು. ಅವರು ಹೀಗೆಯೇ ಬೆಳೆಯಬೇಕೆಂಬುದು ಹಿರಿಯರ ತೀರ್ಮಾನವಾಗಿತ್ತು. ಸಂಸ್ಕೃತ ಓದಬೇಕು, ಮಡಿಯಾಗಿರಬೇಕು, ಪಂಚೆ ಉಡಬೇಕು, ಹೊರಗಡೆ ತಿನ್ನಬಾರದು, ಇತ್ಯಾದಿ ಅನೇಕ ದಿಗ್ಧಂಧನಗಳನ್ನು ಅವರು ಸಂತೋಷವಾಗಿಯೇ ಸ್ವೀಕರಿಸಿದರು. ತನಗೆ ಎಷ್ಟೇ ಕಷ್ಟವಾದರೂ ಕಡೆಯವರೆಗೂ ಚಾಚೂ ತಪ್ಪದೆ ಎಲ್ಲವನ್ನೂ ಪಾಲಿಸಿದರು. ಮುಂದೆ ತಮ್ಮ ಮಕ್ಕಳನ್ನೂ ಇದೇ ದಾರಿಯಲ್ಲಿ ಬೆಳೆಸಿ ಸಂಸ್ಕೃತವನ್ನೂ ಓದಿಸಿ, ಬೇರೆ ವಿದ್ಯೆಗಳಲ್ಲೂ ಪರಿಣತರನ್ನಾಗಿಸಿದರು.
ನನ್ನ ೧೩ನೇ ವಯಸ್ಸಿನಲ್ಲಿ ನನ್ನ ತೀರ್ಥರೂಪುಗಳವರು ಪರಮಪದ ಸೇರಿದ್ದರಿಂದ, ನನ್ನ ಮಾತೃಶ್ರೀಯವರಿದ್ದರೂ, ಮಾ| ಗೋದಾಮದ್ವಿ ಮತ್ತು ತೀ। ಅಣ್ಣನವರು ನನ್ನನ್ನು ಮಗಳಂತೆಯೇ ಕಾಣುತ್ತಿದ್ದರು. ಇದು ನನ್ನ ಮಹಾಭಾಗ್ಯವೆಂದು ತಿಳಿದು ನಾನು ಬಹಳ ಸಂತೋಷವಾಗಿದ್ದೆ. 'ಬಲ್ಲವರೇ ಬಲ್ಲರು ಬೆಲ್ಲದ ಸವಿಯ' ಎನ್ನುವಂತೆ, ಅವರೊಡನೆ ಕಳೆದ ಆ ಸುವರ್ಣಸಮಯವನ್ನು ಈಗಲೂ ಮೆಲುಕುಹಾಕುತ್ತೇನೆ.
ಅವರು ಸಂಸ್ಕೃತ ಸಂಶೋಧನಾ ಸಂಸತ್ ಅನ್ನು ಪ್ರಾರಂಭಿಸಿದಾಗ ನಾನು ಮತ್ತು ನನ್ನ ಪ್ರೀತಿಯ ಅಕ್ಕ ಮಾಲತಿ ಅವರೊಂದಿಗೆ ಮೇಲುಕೋಟೆಯಲ್ಲಿ ಇದ್ದೆವು. ಮನೆಗೆ ಯಾವಾಗಲೂ ಅತಿಥಿ ಗಳನ್ನು ಕರೆದುಕೊಂಡು ಬಂದು ಉಪಚರಿಸುವುದು ಅವರ ಹವ್ಯಾಸಗಳಲ್ಲೊಂದು. ನಾವೂ ಕೈಲಾದ ಸಹಾಯ ಮಾಡುತ್ತಿದ್ದೆವು. ಅವರಿಗೆ ನಮ್ಮ ಬಗ್ಗೆ ಬಹಳ ವಿಶ್ವಾಸವಿತ್ತು. ಒಮ್ಮೆ ಯಾರೊಂದಿಗೋ ಹೇಳುತ್ತಿದ್ದರು : "Malathi and Ranjini are capabale of anything and everything" ۵. 1 ώ 'ಪದ್ಮಶ್ರೀ' ಪ್ರಶಸ್ತಿ ದೊರಕಿದಷ್ಟು ಸಂತೋಷವಾಯ್ತು.
ಅಣ್ಣನವರು ಗುರುಗಳಾಗಿದ್ದರೂ, ಸಂಸ್ಥೆಯ ನಿರ್ದೇಶಕರಾಗಿದ್ದರೂ ಸ್ವಲ್ಪವೂ ಅಹಂಕಾರವಿಲ್ಲದೇ ಸಣ್ಣ ಮಗುವಿನಿಂದ ದೊಡ್ಡವರವರೆಗೆ ಎಲ್ಲರನ್ನೂ ಒಂದೇ ಸಮನಾಗಿ ಭಾವಿಸುತ್ತಾ, ಸಂಸಾರದ ಸಂಕೋಲೆಗಳನ್ನೂ, ಆರ್ಥಿಕ ಸಂಕಷ್ಟಗಳನ್ನೂ, ತನ್ನ ಜವಾಬ್ದಾರಿಗಳನ್ನೂ, ಎಲ್ಲವನ್ನೂ ಸಮತೋಲನದಲ್ಲಿಟ್ಟುಕ್ಕೊಂಡು ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ತನಗೆ ಸಂದ ಗೌರವ, ಸನ್ಮಾನ, ಸ್ಥಾನಮಾನ, ಅಧಿಕಾರಗಳಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ಸರಳ ಸಜ್ಜನಿಕೆಯೇ ಮೂರ್ತಿವೆತ್ತಂತಿದ್ದರು. ಇಷ್ಟೆಲ್ಲಾ ಇದ್ದರೂ ಇವರು ಅನ್ಯಾಯವನ್ನು ಮಾತ್ರ ಸಹಿಸುತ್ತಿರಲಿಲ್ಲ. ಅನ್ಯಾಯದ ವಿರುದ್ಧ ಇವರ ಹೋರಾಟ ನಿರಂತರವಾಗಿತ್ತು. ಆದ್ದರಿಂದಲೇ ಅನೇಕರಿಗೆ ಅವರು ಸಿಂಹಸ್ವಪ್ನವಾಗಿದ್ದರು.
ಯಾವಾಗಲೂ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಬೇಕು, ಫಲವನ್ನು ದೇವರು ನೋಡಿಕೊಳ್ಳುತ್ತಾನೆ ಎನ್ನುತ್ತಿದ್ದರು ಮತ್ತು ಅದನ್ನು ಪಾಲಿಸುತ್ತಿದ್ದರು. ಅವರಿಗೆ ಒಂದು ನಿಮಿಷವೂ ಸಮಯವನ್ನು ಹಾಳುಮಾಡಬಾರದು. ಸದಾ, ಸರ್ವದಾ ದುಡಿಯುತ್ತಿರಬೇಕು. ಯಾವಾಗಲೂ, 'ನಾವು ಮೈಸೂರು ಸಂತೇಪೇಟೆಯ ಎತ್ತಿನಂತಿರಬೇಕು. ಅದು ಕಡೆಯವರೆಗೂ ಗಾಡಿ ಎಳೆಯುತ್ತಿರುತ್ತದೆ. ಹಾಗೆಯೇ ಅಲ್ಲೇ ಕುಸಿದು ಸತ್ತು ಹೋಗುತ್ತದೆ" ಎನ್ನುತ್ತಿದ್ದರು.
ಕೊನೆಯಲ್ಲಿ ಅವರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದಾಗ, ನನಗೆ ಹೇಗಾದರೂ ಅವರನ್ನು ನೋಡಬೇಕೆಂದು ಪರಿತಪಿಸುವಂತಾಯಿತು. ಆದರೆ ಆಗ ಕೊರೋನ ಕಾಲವಾದ್ದರಿಂದ ಆಸ್ಪತ್ರೆಯಲ್ಲಿ ಯಾರನ್ನೂ ಬಿಡುತ್ತಿರಲಿಲ್ಲ.ಏನಾಗುತ್ತದೋ ಅವರಿಗೆ ಎಂಬ ಭಯ ಬೇರೆ. ರಾತ್ರಿಯೆಲ್ಲಾ ನಿದ್ದೆಮಾಡದೆ ಚಡಪಡಿಸುತ್ತಿದ್ದೆ. ಸುಮಾರು ೫ ಗಂಟೆಯ ಹೊತ್ತಿಗೆ ನನಗೇ ತಿಳಿಯದೆ ನಿದ್ದೆಗೆ ಜಾರಿದ್ದೇನೆ. ಆಗ ಒಂದು ಅಪೂರ್ವ ಕನಸಾಯಿತು. ಅಣ್ಣನವರು ಎಂದಿನಂತೆ ಶುಭ್ರವಾಗಿ ಸ್ನಾನಮಾಡಿ, ಕಚ್ಚೆಪಂಚೆ ಉಟ್ಟು, ಹಸಿರುಶಾಲು ಹೊದ್ದು, ಹಣೆಯಮೇಲೆ ನಾಮ ಹಾಕಿಕ್ಕೊಂಡು, ಯಾರಿಗೋ ಕಾಯುತ್ತಿರುವಂತೆ ನಿಂತಿದ್ದಾರೆ. ಆಗ ಸ್ವತಃ ಶ್ರೀ ವೆಂಕಟರಮಣನೇ ಬ೦ದು ಅವರ ಕೈಹಿಡಿದುಕ್ಕೊಂಡು, ಇಬ್ಬರೂ ಜೊತೆಯಾಗಿ ಮೇಲುಕೋಟೆಯ ದೇವಸ್ಥಾನದ ಪಡಸಾಲೆಯಲ್ಲಿ ನಡೆದು ಹೋಗುತ್ತಿರುವಂತೆ ಕಂಡಿತು. ಬೆಚ್ಚಿ ಎದ್ದೆ! ಎಲ್ಲವೂ ಅಯೋಮಯ. ಏನೋ ಗೊಂದಲ. ನಂತರ ಸ್ವಲ್ಪವೇ ಹೊತ್ತಿಗೆ ನನ್ನ ಪ್ರೀತಿಯ ಅಣ್ಣ ಇಹಲೋಕ ತ್ಯಜಿಸಿದರೆಂದು ತಿಳಿಯಿತು!
ಮಹಾತ್ಮರ ಭೌತಿಕ ದೇಹಕ್ಕೆ ಮಾತ್ರ ಅಳಿವು. ಅವರ ಆದರ್ಶಗಳು, ಸಾಧನೆಗಳು, ಜ್ಞಾನಾರ್ಜನೆ, ಪಾಂಡಿತ್ಯ ಜಗತ್ತಿನ ಉದ್ದಗಲಕ್ಕೂ ಪಸರಿಸಿ ಸುವಾಸನೆ ಬೀರಲಿ! ಇಂತಹ ವ್ಯಕ್ತಿಗಳು, ಪರಂಪರೆ ಸಹಸ್ರಾರು ಅಗಲಿ ಎಂದು ಆಶಿಸುತ್ತಾ….
ಕಡೆಯದಾಗಿ ನನ್ನ ಪ್ರೀತಿಯ ಅಣ್ಣನಿಗೆ "ಅಶ್ರುತರ್ಪಣ"