ಆಚಾರ್ಯ ನಮನಂ

शेषार्यवंशमणिदीपनिभं शठारि-
श्रीशैलसूरितनयं श्रिततत्पदाब्जम् ।
तस्मादवाप्तनिगमांतयुगं च लक्ष्मी-
ताताभिदं गुरुवरं शरणं भजामि ॥

ಶ್ರೀಮಾನ್ ಲಕ್ಷ್ಮೀತಾತಾಚಾರ್ಯರ ಮೊದಲ ಪರಿಚಯ ನನಗೆ ಆದದ್ದು ೧೯೬೯ರಲ್ಲಿ. ಆ ಪರಿಚಯವೂ ಭಗವತ್ಸಂಕಲ್ಪದಿಂದ ಮತ್ತು ಪೂರ್ವಜನ್ಮಕೃತಪುಣ್ಯಫಲದಿಂದಲೇ ಆದುದೆಂಬ ತಿಳುವಳಿಕೆ ಬಂದುದು ಬಹಳ ಕಾಲದ ಅನಂತರ! ಸಿಂಹಾವಲೋಕನ ಮಾಡಿದಾಗ ಅಂದಿನಿಂದ ಇಂದಿನವರೆಗೂ ಆ ಪರಿಚಯ ಮೊಳೆತು ಫಲಿಸುತ್ತಲೇ ಬಂದಿದೆ ಎಂದು ನಿಚ್ಚಳವಾಗಿ ಪ್ರಕಟವಾಗುತ್ತಿದೆ.

ಆಗ ತಾನೇ ನಾನೂ ಮತ್ತು ನನ್ನ ಆತ್ಮೀಯಗೆಳತಿ ಪಂಕಜಳೂ ಬೇರೆ ವಿಷಯಗಳಲ್ಲಿ ಪದವಿಯನ್ನು ಗಳಿಸುವುದಕ್ಕೆ ದೊರಕಿದ್ದ ಅವಕಾಶಗಳನ್ನೂ ಬಿಟ್ಟು, ಸಂಸ್ಕೃತ ಆನರ್ಸ್ ಪದವಿ ಕಾರ್ಯಕ್ರಮವನ್ನು ಸೇರಿದ್ದೆವು. ಈ ಕಾರ್ಯಕ್ರಮದ ಪ್ರಾರಂಭಕ್ಕೆ ಕಾರಣ ನಾವೇ ಸೆಂಟ್ರಲ್ ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿದ್ದ ಪಾಂಡುರಂಗಿಯವರನ್ನೂ, ಮತ್ತು ಮುಖ್ಯಾಧ್ಯಾಪಕರಾಗಿದ್ದ ಕೃಷ್ಣಸ್ವಾಮಿಯವರನ್ನೂ ಮುಂದಿಟ್ಟು ಅವರ ಸಹಾಯದಿಂದ ವಿಶ್ವವಿದ್ಯಾಲಯದ ಕಛೇರಿಗೆ ಓಡಾಡಿದುದು. ಕನಿಷ್ಠ ಹತ್ತು ವಿದ್ಯಾರ್ಥಿಗಳಿಲ್ಲದೇ ಸಂಸ್ಕೃತ ಆನರ್ಸ್ ಪದವಿ ಕಾರ್ಯಕ್ರಮವನ್ನು ಆರಂಭಿಸಲು ಶಕ್ಯವಿಲ್ಲವೆಂದು ಹೇಳಿದುದರಿಂದ ನಮ್ಮೊಂದಿಗೆ ಪಿ.ಯು.ಸಿ. ಓದಿದ ಕೆಲವರನ್ನೂ ಸೇರಿಸಿ, ನಮ್ಮ ಹಳೆಯ ಕಾಲೇಜಿನಲ್ಲಿ, ಸೆಂಟ್ರಲ್ ಕಾಲೇಜಿನಲ್ಲಿ, ಮತ್ತು ತಿಳಿದವರ ಮೂಲಕ ಪ್ರಚಾರ ಮಾಡಿ, ೧೨-೧೫ ವಿದ್ಯಾರ್ಥಿಗಳು ಅರ್ಜಿ ಹಾಕಿ, ಕಾರ್ಯಕ್ರಮವಂತೂ ಮಂಜೂರಾಯಿತು. ವಿದ್ಯಾರ್ಥಿಗಳೇನೋ ಸೇರಿಬಿಟ್ಟೆವು. ಆದರೆ ಆ ಕಾರ್ಯಕ್ರಮಕ್ಕೆ ಬೇಕಾದಷ್ಟು ಅಧ್ಯಾಪಕರು ಸೆಂಟ್ರಲ್ ಕಾಲೇಜಿನಲ್ಲಿ ಇರಲಿಲ್ಲ. ಈ ಕಾರಣ ಇತರ ಕಾಲೇಜುಗಳಿಂದ “ಪಾರ್ಟ್-ಟೈಮ್ ಪ್ರೊಫ಼ೆಸರ್”ಗಳನ್ನು ಕರೆತರಬೇಕಾಗಿತ್ತು. ಹೀಗೆ ಬಂದವರಲ್ಲಿ ಒಬ್ಬರು ತರ್ಕ, ವ್ಯಾಕರಣ, ಅಲಂಕಾರಶಾಸ್ತ್ರ, ಛಂದಸ್ಸು, ಇತ್ಯಾದಿ ವಿಶೇಷವಿಷಯಗಳಲ್ಲಿ ಪರಿಣತರಾಗಿದ್ದ ನಮ್ಮ ಆಚಾರ್ಯರು. ಇದಾದ ಎರಡು ವರ್ಷಗಳಲ್ಲೇ ಆಚಾರ್ಯರಿಗೆ ಇಲ್ಲಿಯೇ ಪೂರ್ಣವೃತ್ತಿಯೂ ಆಯಿತು.

ಇಂತಹ ಕಠಿಣವಾದ ಶಾಸ್ತ್ರವಿಷಯಗಳನ್ನು ಪಾಠದ ಮಾಧ್ಯಮವಾಗಿದ್ದ ಆಂಗ್ಲದಲ್ಲಿ ನಮ್ಮ ಮಟ್ಟಕ್ಕೆ ತಂದು ಬೋಧಿಸಿ, ಆ ವಿಷಯಗಳಲ್ಲಿ ಅಭಿರುಚಿಯ ಉದ್ರೇಕವನ್ನೇ ಬೆಳೆಸಿದಂತಹ ಗುರುಗಳು ನಮ್ಮ ಮೆಚ್ಚಿನ ಆಚಾರ್ಯರು, ಲಕ್ಷ್ಮೀತಾತಾಚಾರ್ಯರು. ಕಾಲೇಜಿನಲ್ಲಿ ವ್ಯಾಕರಣ, ನಾಟಕಶಾಸ್ತ್ರ ಪಾಠಗಳು ಅವರಿಂದಲೇ ಆದವು. ಆಗ ನಮ್ಮ ವರ್ಗಕ್ಕೆ ವಯಸ್ಸಿನಲ್ಲಿ ಕಿರಿಯರಾದ ನನಗೂ ಮತ್ತು ಪಂಕಜಳಿಗೂ ಇನ್ನೂ ಬೇಕಾದಷ್ಟೇ ಹುಡುಗಾಟವೂ ಇತ್ತು. ತರಗತಿಯಲ್ಲಿ ಎಷ್ಟೋ ಶ್ಲೋಕಗಳನ್ನು ಓದುತ್ತಿದ್ದಾಗ ಅಪಕ್ವಮತಿಗಳಾದ ನಮಗೆ ಸುಮ್ಮಸುಮ್ಮನೆ ನಗು ಬರುತ್ತಿತ್ತು. ಒಮ್ಮೆ ಮುಂದಿನ ಸಾಲಿನಲ್ಲೇ ಕುಳಿತಿರುತ್ತಿದ್ದ ನಮ್ಮನ್ನು ನೋಡಿ, ಆಚಾರ್ಯರೂ ನಮ್ಮೊಂದಿಗೇ ನಗುತ್ತಾ, “ಅಕಾರಣಹಾಸ್ಯಂ ಬಾಲಸಖಿತ್ವಂ” ಎಂದು ಹೇಳುತ್ತಾ ಪಾಠವನ್ನು ಮುಂದುವರೆಸಿದರು. ಅವರಿಗೆ ಎಂದೂ ಸಿಟ್ಟು ಬರದಿರುವುದಷ್ಟೇ ಇರಲಿ, ಅವರ ಚಿರಕಾಲಿಕವಾದ ಮತ್ತು ವಾತ್ಸಲ್ಯಮಯವಾದ ಹಸನ್ಮುಖ ಇಂದಿಗೂ ಹಾಗೆಯೇ ನನ್ನ ಕಣ್ಣ ಮುಂದೆ ನಿಂತಿದೆ. ಅವರ ಪಾಠಗಳಿಂದ ನಮ್ಮ ಸಂಸ್ಕೃತಾಧ್ಯಯನದ ಅಭಿರುಚಿ, ದಾಹ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ನಾನೂ ಮತ್ತು ಪಂಕಜಾ ಅವರ ಮನೆಗೇ ಹೋಗಿ ಮತ್ತಷ್ಟೂ ಹೆಚ್ಚು ಪಾಠವನ್ನು ಹೇಳಿಸಿಕೊಳ್ಳುವ ಆಸೆಯನ್ನು ಅವರಿಗೆ ಪ್ರಕಟಪಡಿಸಿದೆವು. ಭಾಗ್ಯವಶಾತ್ ಅವರೂ ಸಂತೋಷದಿಂದ ಒಪ್ಪಿಕೊಂಡರು. ಅವರೂ ಪ್ರಾತಃಕರ್ಮಾದಿಗಳನ್ನೆಲ್ಲಾ ಮುಗಿಸಿ ಕಾಲೇಜಿಗೆ ಬರಬೇಕಾಗಿತ್ತು. ಆದುದರಿಂದ ಬೆಳಗಿನ ಜಾವ, ಕತ್ತಲು ಹರಿಯುವುದಕ್ಕೆ ಮುಂಚೆಯೇ ಪ್ರತಿದಿನ ಅವರ ಮನೆಗೆ ಹೋಗಬೇಕಿತ್ತು! ನಾವಿಬ್ಬರೂ ಚಳಿಗಾಲದಲ್ಲೂ ಬೆಳಗಾಗೆದ್ದು ರಾಜಾಜಿನಗರ ಮತ್ತು ಶ್ರೀರಾಮಪುರದಿಂದ ವೈಯಾಳಿಕಾವಲ್ಲಿನವರೆಗೆ ಪಾಠಕ್ಕೆ ನಡೆದು ಹೋಗುತ್ತಿದ್ದೆವು; ಆ ಕಾಲದಲ್ಲಿ ಛಳಿಯೋ ಛಳಿ, ಕತ್ತಲೋ ಕತ್ತಲು, ರಸ್ತೆಯಲ್ಲಿ ಒಂದು ನರಪಿಳ್ಳೆಯೋ ವಾಹನವೋ ಇಲ್ಲ! ಅಂತಹ ಜ್ಞಾನಪಿಪಾಸೆಯನ್ನು ನಮ್ಮಲ್ಲಿ ಹುಟ್ಟಿಸಿದ್ದರು, ಆಚಾರ್ಯರು! ಅವರ ಮನೆಯಲ್ಲಿ, ದಶರೂಪಕ, ಕುವಲಯಾನಂದ, ಸಾಂಖ್ಯ, ತರ್ಕ, ಹಾಗೂ ಮತ್ತಿನ್ನಷ್ಟು ವ್ಯಾಕರಣ ಪಾಠ. ಈ ಸಮಯದಲ್ಲಿ ಪಾಠ ಕನ್ನಡದಲ್ಲಿ, ಮತ್ತು ಅದಕ್ಕೂ ಹೆಚ್ಚಾಗಿ ಸಂಸ್ಕೃತದಲ್ಲಿಯೇ.

ಭಾರತಕ್ಕೆ ಬಂದಾಗಲೆಲ್ಲಾ ಆಚಾರ್ಯರು ಬೆಂಗಳೂರಿನಲ್ಲಿದ್ದರೆ ಬೆಂಗಳೂರಿನಲ್ಲಿ, ಇಲ್ಲದಿದ್ದರೆ ಮೇಲುಕೋಟೆಯಲ್ಲಿ ಅವರ ಮನೆಗೆ ನಮ್ಮವರೊಂದಿಗೆ ಹೋಗಿ ನಮಿಸಿ ಅವರ ಆಶೀರ್ವಾದ ಪಡೆದಿದ್ದೇನೆ. ಆ ಸಮಯದಲ್ಲೂ, ಅವರು ಕೊಟ್ಟ ಉತ್ತೇಜನ ಅಷ್ಟಿಷ್ಟಲ್ಲ. “ನಿಮ್ಮದಾದನಂತರ ಎಷ್ಟೋ ಬ್ಯಾಚುಗಳಲ್ಲಿ ಬಂದು ವಿದ್ಯಾರ್ಥಿಗಳು ಸಂಸ್ಕೃತ ಆನರ್ಸ್, ಎಂ.ಏ. ಮಾಡಿದರು. ಆದರೆ ನಿಮ್ಮದು ನ ಭೂತೋ ನ ಭವಿಷ್ಯತಿ, ಕೊಟ್ಟಿದ್ದೆಲ್ಲಾ ಹೀರುತ್ತಿದ್ದಿರಿ” ಎಂದು ಪದೇ ಪದೇ ಹೇಳುತ್ತಿದ್ದರು. “ನಿನ್ನ ಪಿ.ಎಚ್.ಡಿ ಯನ್ನು ಮುಗಿಸದೆ ಅಮೆರಿಕಾಗೆ ಹೋಗಿಬಿಟ್ಟೆಯಲ್ಲಮ್ಮಾ. ಈಗಲೂ ಮುಗಿಸಿಬಿಡು. ಯಾವುದಾದರೂ ಹೊಸ ವಿಷಯವನ್ನೇ ಪ್ರಾರಂಭಿಸಿದರೂ ಸರಿ. ಎಷ್ಟೋ ವಿದ್ಯಾರ್ಥಿಗಳು ವ್ಯಾಖ್ಯಾತಪುಸ್ತಕಗಳ ಅಥವಾ ಗ್ರಂಥಗಳ ಬಗ್ಗೆಯೆಲ್ಲಾ ಬರೆದು ಪಿ.ಎಚ್.ಡಿ ಸಂಪಾದಿಸುತ್ತಿದ್ದಾರೆ. ಚಿಂತನಪರವಾದ ವಿಷಯವನ್ನು ಕುರಿತು ಸಂಶೋಧಿಸಲು ನಿನಗೆ ಶಕ್ತಿಯಿದೆ. ಹಾಗೆಯೇ ಮಾಡು. ದುರದೃಷ್ಟವಶಾತ್ ನನ್ನ ಕೈಹೊರೆ ಈಗ ಬಹಳ, ನನಗೆ ಸಮಯವೇ ಇಲ್ಲ. ಆದರೆ ವರದಾಚಾರ್ಯ ಸ್ವಾಮಿಗಳನ್ನು ಪರಿಚಯ ಮಾಡಿಸುತ್ತೇನೆ. ಅವರದು ಅತ್ಯುತ್ತಮವಾದ ಪಾಠ”, ಇತ್ಯಾದಿಯಾಗಿ ಹಲವಾರು ಬಾರಿ ಹೇಳಿದರು. ಆಗ “ಆ ಪದವಿಯನ್ನಿಟ್ಟುಕೊಂಡು ನಾನೀಗ ಏನು ಮಾಡಲಿ, ನಿಮಗೂ ಮತ್ತು ನನಗೂ ಪುರಸೊತ್ತಾದಾಗ ನಿಮ್ಮ ಬಳಿಯೇ ಬಂದು ಅಧ್ಯಯನ ಮಾಡಬೇಕೆಂದು ದೈವಸಂಕಲ್ಪವೇನೋ” ಎಂದುಬಿಟ್ಟೆ. ನನ್ನ ಸಂದರ್ಭಗಳು ಅದಕ್ಕೆ ಸರಿಯಾಗದುದರಿಂದ ಅವರ ಆ ಆಸೆಯೊಂದನ್ನು ನಾನು ನೆರವೇರಿಸಲಾಗಲಿಲ್ಲ. ಆದರೂ ಒಂದು ದೊಡ್ಡ ಸಮಾಧಾನ. ನಾನು ದೇಶ ಬಿಟ್ಟು ಅಮೆರಿಕಾಗೆ ಬಂದು ನೆಲಸಿ ಅವಕಾಶ-ನಿರವಕಾಶಗಳ ಒತ್ತಡದಿಂದ ಬೇರೆ ವಿಷಯಗಳನ್ನು ಅಧ್ಯಯನ ಮಾಡಬೇಕಾಗಿ ಬಂದರೂ, ಐದು ದಶಕಗಳ ಮುಂಚೆ ಅವರು ನನ್ನಲ್ಲಿ ಬೇರೂರಿಸಿದ ಸಂಸ್ಕಾರದಿಂದ, ಇಂದಿನವರೆಗೂ ಕೊಟ್ಟ ಉತ್ತೇಜನ ಮತ್ತು ಭರವಸೆಯಿಂದ ಇನ್ನೂ ಅಳಿಯದೆ ಉಳಿದು ಬಂದ ಅವರ ವಿದ್ಯಾದಾನವನ್ನು ನಾನು ಇತರರಿಗೆ ಹಂಚಬಲ್ಲವಳಾಗಿದ್ದೇನೆ ಎಂಬುದು ಇತ್ತೀಚೆಗೆ ಅರಿವಿಗೆ ಬಂದು ಕ್ಷಣಕ್ಷಣಕ್ಕೂ ಅವರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುತ್ತೇನೆ.

ಈ ಸಂದರ್ಶನಗಳಿಂದ ನನ್ನ ಯಜಮಾನರೂ (ಡಾ. ಇ.ಎಸ್. ವೆಂಕಟೇಶ್), ಮತ್ತು ಬೆಳೆಯುತ್ತಿದ್ದ ನನ್ನ ಮಕ್ಕಳೂ ಕೂಡ ಆಚಾರ್ಯರು ಎಷ್ಟು ಗೌರವಾನ್ವಿತರು, ಮತ್ತು ಎಂತಹ ವಿಶೇಷ ವ್ಯಕ್ತಿಯೆಂದು ಅರಿತರು. ಹೀಗೆಯೇ ಈ ಸಂದರ್ಶನಗಳ ನಡುವೆ ನನ್ನ ಯಜಮಾನರ ಮನೆಯವರಿಗೂ ಅವರ ಪರಿಚಯವಾಗಿ ನಾನೂ, ನನ್ನ ಯಜಮಾನರೂ, ನನಗೆ ಪಿತೃಸಮಾನರಾದ, ಹಾಗೂ ನನ್ನ ಯಜಮಾನರ ಹಿರಿಯ ಅಣ್ಣಂದಿರಾದ ಡಾ. ಇ.ಎಸ್. ದ್ವಾರಕಾದಾಸ, ಮತ್ತು ಅವರ ಪತ್ನಿ, ಮಾತೃಶ್ರೀ ಶುಭಾ ಅವರೂ ಮೇಲುಕೋಟೆಗೆ ಒಟ್ಟಾಗಿ ಹೋಗಿ ಆಚಾರ್ಯರಿಂದ ಸಮಾಶ್ರಯಣ ಪಡೆದೆವು.

ನನ್ನ ಮಗಳೂ ಪ್ರೌಢಶಾಲೆಯಲ್ಲಿದ್ದಾಗ ಆಚಾರ್ಯರೊಂದಿಗೆ ಅವಳಿಗಾದ ಅನುಭವಗಳನ್ನು ಮರೆತಿಲ್ಲ. ನನಗಿದ್ದ ಗಿಡಗಳ ಮೇಲಿನ ವ್ಯಾಮೋಹವನ್ನರಿತಿದ್ದ ಆಚಾರ್ಯರು ಒಮ್ಮೆ ಮೇಲುಕೋಟೆಯಲ್ಲಿ ಅವರು ಬೆಳೆಸಿದ್ದ ವಿಶೇಷವಾದ ಗಿಡಗಳನ್ನೆಲ್ಲಾ ತೋರಿಸುತ್ತಾ ಮನೋರಂಜನಿ ಪುಷ್ಪವೊಂದನ್ನು ನನ್ನ ಮಗಳ ಕೈಗೆ ಕೊಟ್ಟು ಅದರ ವಿಶೇಷವನ್ನು ವಿವರಿಸಿದರು. ಅದನ್ನು ಕೇಳಿ ಅವಳಿಗೆ ಅಚ್ಚರಿಯೋ ಅಚ್ಚರಿ. ಅದಾದ ನಂತರ ಇನ್ನೊಮ್ಮೆ ಮೇಲುಕೋಟೆಯಲ್ಲಿ ಅಕ್ಕ ತಂಗಿಯರ ಕೊಳಗಳನ್ನು ತೋರಿಸುತ್ತಾ ಹಿಂದಿನ ಕಾಲದ ವೈದಿಕಾಧ್ಯಯನವೆಲ್ಲವೂ ಹೇಗೆ ಜಲಸ್ಥಾನಗಳ ಬಳಿಯೇ ಆಗುತ್ತಿದ್ದವೆಂದು ವರ್ಣಿಸಿದರು. ಆಗ ಅವಳು, ತಾನೂ ಅವರೊಂದಿಗೆ ಹಾಗೆ ಗುರುಕುಲವಾಸ ಮಾಡಿ ಏನಾದರೂ ಅಧ್ಯಯನ ಮಾಡಬಹುದೇ ಎಂದು ಕೇಳಿದಾಗ, “ಒಂದು ಬೇಸಿಗೆಯ ರಜದಲ್ಲಿ ಹಾಗೆ ಮಾಡಬಹುದೇನೋ” ಎಂದರು, ಆಚಾರ್ಯರು. ಮನೆಗೆ ಹಿಂತಿರುಗಿದ ನಂತರ, ಅವರು ಈ ವಿಷಯವನ್ನು ಗೋದಾಮಾಮಿಗೆ ಹೇಳಿದಾಗ, ಅವರೂ, “ನಮಗೆ ಹೆಣ್ಣು ಮಕ್ಕಳಿಲ್ಲ, ಖಂಡಿತ ಬಾಮ್ಮ, ನಮಗೂ ಸಂತೋಷ” ಎಂದು ಹಾರ್ದಿಕವಾಗಿ ಹೇಳಿದರು. ಇಲ್ಲಿನ ವಿದ್ಯಾಭ್ಯಾಸದ ನಡುವೆ ಅದನ್ನು ಈಡೇರಿಸಲಾಗಲಿಲ್ಲ. ಮತ್ತೊಮ್ಮೆ ಅವರನ್ನು ಸಂದರ್ಶಿಸಿದಾಗ ಅವರೊಂದಿಗೆ ದೀರ್ಘಕಾಲ ಮಾತನಾಡಿದ ನಂತರ, “ಏರೋಸ್ಪೇಸ್ನಲ್ಲಿ ಪದವಿ ಗಳಿಸಿ ಮೇಲುಕೋಟೆಗೆ ಹೋಗಿ ಅಲ್ಲೇ ಇದ್ದು ಅವರೊಂದಿಗೆ ಆ ವಿಷಯದ ಬಗ್ಗೆ ಸಂಸ್ಕೃತದ ಗ್ರಂಥಗಳಿದ್ದರೆ ಅವುಗಳನ್ನು ಅಧ್ಯಯನ ಮಾಡುತ್ತೇನೆ” ಎಂದು ಆಸೆ ಪಟ್ಟಳು. ಅವಳಿಗೆ ಬೇಕಾದ ಕಾಲೇಜಿನಲ್ಲಿ, ಅವಕಾಶವಾದ ಏರೋಸ್ಪೇಸ್ಗೆ ಸಮೀಪದ ವಿಷಯವಾದ ಮೆಕ್ಯಾನಿಕಲ್ ಎಂಜಿನಿಯರಿಂಗ್ಅನ್ನೇ ಓದಿದಳು. ಆ ನಂತರ ಭಗವಂತ ಅವಳಿಗೆ ಮತ್ತೊಂದು ಸನ್ಮಾರ್ಗ ತೋರಿಸಿದ. ಆಚಾರ್ಯರ ಆಶೀರ್ವಾದದಿಂದ, ಅವಳಿಗೆ ತಿಳಿಯದಂತೆಯೇ, ಆಚಾರ್ಯರು ಆಗಾಗ್ಗೆ ಹೆಗ್ಗಳಿಕೆಯಿಂದ ಹೊಗಳುತ್ತಿದ್ದ ಮೇಲುಕೋಟೆಯ ನವೋದಯ ಕವಿ ಪು.ತಿ.ನ. ಅವರ ಬೀಗರ ಮನೆಗೇ ಸೊಸೆಯಾಗಿ ಕ್ಯಾಲಿಫ಼ೋರ್ನಿಯಾದಲ್ಲಿ ನೆಲಸಿದಳು. ಮದುವೆಗೆ ಮುಂಚೆ ಹೋಗಿ ನಾವೆಲ್ಲರೂ ನಮಸ್ಕರಿಸಿದಾಗ ಆಚಾರ್ಯರು ವಿಷಯ ತಿಳಿದು ಬಹಳ ಹೆಮ್ಮೆ ಪಟ್ಟರು. ಅವಳ ಮದುವೆಗೂ ಬಂದು ವಧೂವರರನ್ನು ಆಶೀರ್ವದಿಸಿದರು. ಇಷ್ಟಾಗಿ, ಅವಳೂ ನಮ್ಮ ದೇಶಕ್ಕೆ ಬಂದಾಗ ಹೋಗಿ ಆಚಾರ್ಯರನ್ನು ನೋಡಿದಳಷ್ಟೇ ಅಲ್ಲ, ಅವಳ ಪತಿಯನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಿ ಎಲ್ಲರೂ ಅವರ ಆಶೀರ್ವಾದ ಪಡೆದರು. ಅಂತಹ ಮಹಾನುಭಾವರು ಅವಳ ಎರಡು ಮತ್ತು ಒಂದು ವರ್ಷದ ಮಕ್ಕಳನ್ನು ಮಡಿಯಲ್ಲಿರಿಸಿಕೊಂಡು, ಒಣದ್ರಾಕ್ಷಿಯನ್ನು ಕೈಯಲ್ಲಿಟ್ಟು, ಮುದ್ದಾಗಿ ಮಾತನಾಡಿಸಿಕೊಂಡು ಆ ಮಕ್ಕಳ ಮುಗ್ಧತೆಯನ್ನು ಆನಂದಿಂದ ಕೊಂಡಾಡಿ ನಲಿದಾಡಿದುದನ್ನು ಅವಳು ಇಂದಿಗೂ ಜ್ಞಾಪಿಸಿಕೊಳ್ಳುತ್ತಾಳೆ.

ನಂತರ ನಾವೂ ಕ್ಯಾಲಿಫ಼ೋರ್ನಿಯಾಗೇ ಹೋಗಿ ನೆಲೆಸಿ ಅಲ್ಲಿ ಒಂದು ಫ಼ಾರ್ಮ್-ಹೌಸ್ನಲ್ಲಿದ್ದೆವು. ಮನೆಯಲ್ಲಿ ದೊಡ್ಡ ತೋಟ ಮತ್ತು ಹಸುಕರುಗಳೂ ಇದ್ದವು. ೨೦೧೭ರಲ್ಲಿ ಮೇಲುಕೋಟೆಗೆ ಹೋದಾಗ, “ಮನೆಯಲ್ಲಿ ಈಗ ಬಾವಿ ನೀರು, ನಿಮ್ಮ ಅಭಿರುಚಿಗೆ ತಕ್ಕಂತೆ ಹಣ್ಣು ತರಕಾರಿಗಳ ತೋಟ. ತಾವು ನಮ್ಮ ಮನೆಯಲ್ಲಿ ಬಂದು ತಂಗಬೇಕು” ಎಂದು ನನ್ನ ಯಜಮಾನರು ವಿನಂತಿಸಿಕೊಂಡಾಗ ಸುಮ್ಮನೆ ನಕ್ಕರು! ಇದಾದ ಎರಡು ವರ್ಷಗಳಲ್ಲಿ ನಮ್ಮವರೂ ಪರಮಪದವನ್ನೈದಿದರು, ಆ ನಂತರ ಭಗವಂತ ಆಚಾರ್ಯರನ್ನೂ ಅಲ್ಲಿಗೇ ಕರೆಸಿಕೊಂಡ.

ಇತ್ತೀಚೆಗೆ ನನ್ನ ಮೂರು ಮೊಮ್ಮಕ್ಕಳೂ ಬೆಳೆಯುತ್ತಿರುವಂತೆ ನನಗೆ ಕೊಂಚ ಸಮಯಾವಕಾಶವಾಗುತ್ತಿರುವುದರಿಂದ ಆಚಾರ್ಯರ ಸಲಹೆಯಂತೆ ಅವರ ಆಶೀರ್ವಾದದಿಂದ, ಮಾರ್ಗದರ್ಶನದಿಂದ ನಾನು ಹಲವಾರು ಹಿರಿಯರಿಗೆ ಸಂಸ್ಕೃತಪಾಠ ಹೇಳುತ್ತಿದ್ದೇನೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು; ಆದರೆ, ಅವರು ಹಾಕಿದ ಭದ್ರವಾದ ಬುನಾದಿಯ ಮೇಲಿದೆ ಈಗ ನನ್ನ ದಾರಿ. ಅವರ ಉತ್ತೇಜನ, ಆಶೀರ್ವಾದವೇ ನನಗೆ ನಿರಂತರವಾದ ಕೈಗೋಲು. ಅವರ ಹಸನ್ಮುಖದ ಮತ್ತು ವಾತ್ಸಲ್ಯದ ಮಾತಿನ ನೆನಪೇ ದಾರಿದೀಪ.

तर्के व्याकरणे साङ्ख्ये छन्दश्शास्त्रे ततः परम् ।
तथा नाटकशास्त्रे च प्रकृष्टं शिक्षकं मम ॥
प्रातः सायं परामर्शे सर्वकालेषु नौमि तम् ।
स्मरामि तस्य वचनं करिष्ये तेन शासितम् ॥

ಹೃತ್ಪೂರ್ವಕ ಪ್ರಣಾಮಗಳೊಂದಿಗೆ,
ವಿಜಯಾ ವೆಂಕಟೇಶ್