ಅವರಂತಹ ಗುರುಗಳು न भूतो न भविष्यति

अस्मद्गुरुभ्यो नमः ।
श्रीमते श्रीलक्ष्मीताताचार्याय महादेशिकाय नमः ।

೧೯೬೯ನೆಯ ಇಸವಿ ಜೂನ್ ತಿಂಗಳು. ಎಮ್ ಇ ಎಸ್ ಕಾಲೇಜಿನಲ್ಲಿ ಪಿ. ಯು. ಸಿ. ಮುಗಿಸಿ ನಾನೂ ನನ್ನ ಆಪ್ತ ಗೆಳತಿ ವಿಜಯಾ ಸಂಸ್ಕೃತ ಆನರ್ಸ್ ಗೆ ಬೆಂಗಳೂರು ವಿಶ್ವವಿದ್ಯಾಲಯ ಸೆಂಟ್ರಲ್ ಕಾಲೇಜಿಗೆ ಸೇರಿದ್ದೆವು. ನಮ್ಮೊಡನೆ ಇನ್ನೂ ೧೨/೧೩ ವಿದ್ಯಾರ್ಥಿಗಳಿದ್ದರು. ಅಲ್ಲಿಯವರೆಗೆ ದ್ವಿತೀಯ ಭಾಷೆ ಸಂಸ್ಕೃತವನ್ನಷ್ಟೆ ಓದಿದ್ದ ನಮಗೆ ಶಾಸ್ತ್ರಾಧ್ಯಯನದ ಪರಿಚಯ ಹಾಗಿರಲಿ, ಐಚ್ಛಿಕ ಸಂಸ್ಕೃತ ಹೇಗಿರಬಹುದೆಂಬ ಕಲ್ಪನೆಯೂ ಇರಲಿಲ್ಲ. ಮೊದಲವರ್ಷ ಹೇಗೋ ಕಳೆಯಿತು. ಏನಂತಹ ರುಚಿ ಹತ್ತಲಿಲ್ಲ ಅಧ್ಯಯನದಲ್ಲಿ.

ಎರಡನೆಯ ವರ್ಷ ಆರ೦ಭವಾಯ್ತು. ವೈಯಾಕರಣ ಸಿದ್ಧಾಂತಕೌಮುದೀ, ತರ್ಕಸಂಗ್ರಹ ಇತ್ಯಾದಿ ಶಾಸ್ತ್ರಾಧ್ಯಯನ ಪ್ರಾರಂಭ. ನಮ್ಮ ಓದಿಗೆ ಹೊಸ ತಿರುವು. ಕಾರಣ - ಶ್ರೀ ತಾತಾಚಾರ್ಯರು ಪಕ್ಕದ ಜಿ. ಯೆ. ಎಸ್. ಕಾಲೇಜಿನಿಂದ ಡೆಪ್ಯೂಟೇಷನ್ ನಲ್ಲಿ ಬಂದು ನಮಗೆ ವ್ಯಾಕರಣ ಮತ್ತು ತರ್ಕ ಪಾಠ ಹೇಳಿದ್ದು. ಉದ್ದಾಮ ಪಂಡಿತರಿಗೆ ನಮ್ಮ ಮಟ್ಟಕ್ಕೆ ಇಳಿದು ಅದೂ ಆಂಗ್ಲ ಮಾಧ್ಯಮದಲ್ಲಿ ಪಾಠ ಹೇಳುವುದು ಸುಲಭವೇನಿರಲಿಲ್ಲ. ಈ ವಿಷಯಗಳು ಪಾಠಶಾಲೆಗಳಲ್ಲಿ ಶಾಸ್ತ್ರ ರೀತ್ಯಾ ಸಂಸ್ಕೃತ ಮಾಧ್ಯಮದಲ್ಲಿ ಬೋಧಿಸುವಂತಹವು. ಆ ವರ್ಷ ನಮಗೆ ಅವರು ಅತ್ಯಂತ ಮುತುವರ್ಜಿಯಿಂದ ಸಂಜ್ಞಾ, ಪರಿಭಾಷಾ ಮತ್ತು ಕಾರಕ ಪ್ರಕರಣಗಳನ್ನು ಬೋಧಿಸಿದರು. ಜತೆಗೆ ತರ್ಕಸಂಗ್ರಹ ಹಾಗೂ ದೀಪಿಕೆ. ಅವರ ಬೋಧನೆಯ ವೈಖರಿ - ವಿಧಾನ ಹೇಗಿದ್ದಿತೆಂದರೆ ಅಂತಿಮ ಪರೀಕ್ಷೆಯಲ್ಲಿ ಕ್ಲಾಸಿನ ಎಲ್ಲ ವಿದ್ಯಾರ್ಥಿಗಳಿಗೂ ನೂರಕ್ಕೆ ನೂರು ವ್ಯಾಕರಣದಲ್ಲಿ.

(ನಮ್ಮ ಉತ್ತರ ಪತ್ರಿಕೆಗಳನ್ನು ಬೇರೊಂದು ಕಾಲೇಜಿನ ಅಧ್ಯಾಪಕರು ಮೌಲ್ಯಮಾಪನ ಮಾಡುತ್ತಿದ್ದರು) ಅಧ್ಯಾಪಕರಿಗೂ ಆನಂದ ನಮಗೋ ಸ್ವರ್ಗಕ್ಕೆ ಮೂರೇ ಗೇಣು! ಮೂರನೆಯ ವರ್ಷದ ವೇಳೆಗೆ ತಾತಾಚಾರ್ಯರನ್ನು ವಿಶ್ವವಿದ್ಯಾಲಯಕ್ಕೇ ವರ್ಗ ಮಾಡಿದ್ದರು. ನಮ್ಮ ಅದೃಷ್ಟವೇ ಸರಿ. ವ್ಯಾಕರಣ, ತರ್ಕ ಮುಂದುವರೆದಿದ್ದು ಜತೆಗೆ ಆ ವರ್ಷ ನಮಗೆ ದಶರೂಪಕವನ್ನೂ ಪಾಠ ಹೇಳಿದರು. ಅದು ಅಲಂಕಾರ ಗ್ರಂಥ. ಕಾವ್ಯದ ಸೊಬಗನ್ನು ಅದರಲ್ಲಿ ಹೇಗೆ ತಂದಿರಬಹುದು ಹೇಳಿ. ನಮ್ಮ ಗುರುಗಳು ಅದನ್ನು ಮಾಡಿದ್ದರು. ನಾಟಕ ಲಕ್ಷಣ - ನಾಟಕದಲ್ಲಿನ ವಿವಿಧ ಘಟ್ಟಗಳು - ಸಂಧಿ ಇತ್ಯಾದಿಗಳನ್ನು ಹೇಳುವಾಗ ಕೃತಿಕಾರ ಉದಾಹರಿಸಿದ ವೇಣೀಸಂಹಾರ ನಾಟಕದ ಒಂದೊಂದು ಶ್ಲೋಕವನ್ನೂ ವರ್ಣಿಸುತ್ತ ರಂಗದ ಮೇಲೆ ನಾಟಕವೇ ನಡೆಯುತ್ತಿದೆಯೋ ಎಂಬಂತೆ ಬೋಧಿಸಿದ್ದರು. ಹೀಗೆ ಅವರು ಪಾಠ ಹೇಳಿದ ಒಂದೊಂದು ವಿಷಯವೂ ಒಂದೊಂದು ಕ್ಲಾಸೂ ನನ್ನ ನೆನಪಿನಲ್ಲಿ ಇನ್ನೂ ಹಸಿರಾಗಿದೆ.

ಕಾಲೇಜಿನಲ್ಲಿ ಮಾತ್ರವಲ್ಲದೆ ಅವರ ಮನೆಗೂ ಸಹ ಬೆಳ್ಳಂಬೆಳಗ್ಗೆ ಹೋಗಿ ಸಾಂಖ್ಯಕಾರಿಕೆಯನ್ನು ಕಲಿತೆವು. ಏಕೋ ಏನೋ ಕಾಲೇಜಿನಲ್ಲಿ ಪಾಠ ಹೇಳಿದ ಮತ್ತೊಬ್ಬ ಲೆಕ್ಚರರ್ ವಾಚಸ್ಪತಿಮಿಶ್ರನ ತತ್ತ್ವಕೌಮುದೀ ವ್ಯಾಖ್ಯಾನವನ್ನು ಮುಟ್ಟುವ ಗೋಜಿಗೇ ಹೋಗಿರಲಿಲ್ಲ. ಅದಿಲ್ಲದೆ ಸಾಂಖ್ಯಕಾರಿಕೆ ಅರ್ಥವಾಗುವುದೇ ಇಲ್ಲ. ನಮ್ಮ ಗುರುಗಳು ಆ ಕೊರತೆಯನ್ನು ನಮ್ಮಿಬ್ಬರಿಗೆ (ವಿಜಯಾ ಮತ್ತು ನಾನು) ತುಂಬಿ ಕೊಟ್ಟಿದ್ದರು. ಎಂತಹ ನಿರ್ವಂಚನೆಯಿಂದ ಮಾಡಿದ ವಿದ್ಯಾದಾನ! ಈಬಾರಿಯೂ ನಮಗೂ ಅವರಿಗೂ ಒಂದು ಅಗ್ಗಳಿಕೆ ಪ್ರಶಂಸೆ ದೊರೆತಿತ್ತು - ನಮ್ಮ ಉತ್ತರ ಪತ್ರಿಕೆಗಳನ್ನು ಪರಿಶೀಲನ ಮಾಡಿದ ಹಿರಿಯ ವಿದ್ವಾಂಸರು (ಶ್ರೀ ರಾಮಚಂದ್ರ ಶಾಸ್ತ್ರಿಗಳೆಂದು ನೆನಪು) ವಿಶ್ವವಿದ್ಯಾಲಯದಲ್ಲಿ ನಮಗೆ ಹಿರಿಯರಾದ ವಿದ್ಯಾರ್ಥಿಯೊಬ್ಬರಿಗೆ ಹೇಳಿದರಂತೆ - "ಸಾಂಖ್ಯಕಾರಿಕೆ ಏನೇನೂ ಪಾಠ ಮಾಡಿಲ್ಲ ಯೂನಿವರ್ಸಿಟಿಯಲ್ಲಿ, ಆದರೆ ಇಬ್ಬರು ಮಾತ್ರ ತುಂಬ ಚೆನ್ನಾಗಿ ಉತ್ತರ ಬರೆದಿದ್ದಾರೆ, ಅವರಿಗೆ ಇನ್ನೆಲ್ಲೋ ಪಾಠ ಆಗಿರಬೇಕು" ಎಂದು. ಈ ವಿಷಯ ತಿಳಿದ ಗುರುಗಳಿಗೂ ನಮಗೂ ಸಹ ಆನಂದವೋ ಆನಂದ. ಪಾಠ ಹೇಳಿದ್ದು ಸಾರ್ಥಕವಾಯಿತು ಎನಿಸಿರಬೇಕು ಅವರಿಗೆ. ನಮಗಿಬ್ಬರಿಗೂ ಶೇಖಡ ೭೯ ಅಂಕಗಳು ಆ ಪತ್ರಿಕೆಯಲ್ಲಿ.

೭೨ ಜೂನ್ ಆನರ್ಸ್ ಮುಗಿಸಿ ಎಮ್ ಎ ಗೆ ಸೇರಿದ್ದೆವು. ಅಷ?ರವೇಳೆಗೆ ಸಂಸ್ಕೃತಾಧ್ಯಯನದಲ್ಲಿ ಪೂರ್ಣ ರುಚಿ ಹುಟ್ಟಿದ್ದು ಈ ವಿಷಯವನ್ನು ನಾನು ಓದು ಮುಗಿಸಿ ಕೆಲಸಕ್ಕೆ ಸೇರಿದ ಬಳಿಕ, ಇತ್ತೀಚಿನವರೆಗೂ ಅನೇಕ ಬಾರಿ ಗುರುಗಳನ್ನು ಕಂಡಾಗಲೆಲ್ಲ ಹೇಳುತ್ತಿದ್ದೆ.

ಗುರುಗಳೊಡನೆ ಉಜ್ಜಯಿನೀ ಯಾತ್ರೆ ನಾನೂ ಗೆಳತಿ ವಿಜಯಾಳೂ ಮರೆಯಲಾರದ ಒಂದು. ನಾವು ಮೊದಲ ವರ್ಷ ಎಮ್. ಎ. ಓದುತ್ತಿದ್ದಾಗ ನಮ್ಮನ್ನು ಉಜ್ಜಯಿನಿಯ ಕಾಳಿದಾಸ ಸಮಾರೋಹದ ಅಂಗವಾಗಿ ನಡೆಯುತ್ತಿದ್ದ ಚರ್ಚಾಸ್ಪರ್ಧೆಗೆ ಕಳುಹಿಸಲು ಆಯ್ಕೆ ಮಾಡಿದ್ದರು ನಮ್ಮ ಪ್ರೊಫೆಸರ್ ಪಾಂಡುರಂಗಿಯವರು. ಆದರೆ ಬಹಳ ಸಂಪ್ರದಾಯಸ್ಥರ ಮನೆಯ ಮಕ್ಕಳಾದ ನಮ್ಮನ್ನು ಕಳುಹಿಸಲು ನಮ್ಮ ತಂದೆಯಾಗಲೀ ಅವಳ ತಂದೆಯಾಗಲೀ ಒಪ್ಪುವವರಲ್ಲವೆಂದು ಹೇಗೋ ತಾತಾಚಾರ್ಯ ಮೇಷ್ಟರ ಜತೆಯಿದ್ದರೆ ಕಳುಹಿಸಬಹುದೆಂದು ಅವರನ್ನು ಮೊದಲು ಪುಸಲಾಯಿಸಿ ಒಪ್ಪಿಸಿದ್ದರು. ಆಚಾರ್ಯರಾದರೋ ಬಹಳ ಮಡಿವಂತರು ಕಂಡಲ್ಲಿ ಏನನ್ನೂ ತಿನ್ನುವವರಲ್ಲ. ಅಲ್ಲಿಯ ವಿಭಾಗದ ಮುಖ್ಯಸ್ಥರು ನಮ್ಮವರೆಂದು ತಿಳಿದು ಬಹುಶಃ ಸ್ವಯಂಪಾಕಕ್ಕೆ ಏನಾದರೂ ವ್ಯವಸ್ಥೆ ಮಾಡಬಹುದೆಂದು ಎಣಿಸಿದ್ದರು. ಆದರೆ, ಅಲ್ಲಿಗೆ ಹೋದ ನಮಗೆ ನಿರಾಶೆಯೇ ಕಾದಿತ್ತು. ಒಂದು ವಾರದ ಕಾಲ ಕೇವಲ ಬಾಳೆಹಣ್ಣು ಹಾಲು ಇಷ್ಟರಲ್ಲೇ ಇರಬೇಕಾಯಿತು. ಅಷ್ಟಲ್ಲದೆ ಡಿಸೆಂಬ?ನ ಕೊರೆಯುವ ಛಳಿಯಲ್ಲಿ ಬೋರ್ವೆಲ್ ನೀರಿನಲ್ಲಿ ಅನುಷ್ಠಾನ ಮುಗಿಸಿ ಬರುತ್ತಿದ್ದರು.

ಇದು ಹಾಗಿರಲಿ, ಮುಲ್ಕಿ ಮುಷ್ಕರದ ಕಾರಣ ನಮ್ಮ ರೈಲುಗಳು ರದ್ದಾಗಿ ಒಂದಕ್ಕೆರಡು ಖರ್ಚು ಮಾಡಿಕೊಂಡು ಬಸ್ ಪ್ರಯಾಣ ಮಾಡಬೇಕಾಗಿ ಬಂತು. ಇಲ್ಲಿಂದ ಹೈದರಾಬಾದು, ಅಲ್ಲಿಂದ ನಾಗಪುರ ಮುಂದಕ್ಕೆ ಭೂಪಾಲ್ ಬಳಿಕ ಉಜ್ಜಯಿನಿ. ಈ ಪ್ರಯಾಣ ಮುಗಿಸುವ ವೇಳೆಗೇ ನನಗೆ ಗಂಟಲು ಬೇನೆ ಜ್ವರ. ಎರಡು ದಿನಗಳ ತರುವಾಯ ವಿಜಯಾ ಮಲಗಿದಳು. ಇನ್ನು ಚರ್ಚಾಸ್ಪರ್ಧೆಯಲ್ಲಿ ನನಗೆ ಗಂಟಲೇ ಹೊರಡಲಿಲ್ಲ. ವಿಜಯಾಳಿಗೆ ಸಭಾಕಂಪವುಂಟಾಗಿ ಅರ್ಧದಲ್ಲೇ ರಂಗದಿಂದ ಇಳಿದು ಬಂದಳು. ಪಾಪ ಮೇಷ್ಟರಿಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಜತೆಗೆ ನಮ್ಮ ಔಷಧಿಯ ಖರ್ಚು ಇತ್ಯಾದಿಗಳನ್ನೂ ಅವರು ಭರಿಸಬೇಕಾಗಿ ಬಂದಿತು. ಇದೆಲ್ಲ ಸಾಲದೆಂದು ನಮ್ಮ ಸೋಂಕು ಅವರಿಗೂ ಅಂಟಿತು. ಜ್ವರವೇಗದಲ್ಲಿ ಅವರು ಕನಲಿದಾಗ ನಾವು ನಿಜಕ್ಕೂ ಹೆದರಿದೆವು. ಅಷ್ಟಾದರೂ ನಮ್ಮನ್ನು ಊರು ಸುತ್ತುವುದಕ್ಕೆ ಕರೆದುಕೊಂಡು ಹೋದರು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿದೆವು. ಹಿಂದಿರುಗುವಾಗ ಮತ್ತೆ ಅದೇ ಹೈದರಾಬಾದಿಗೆ ಬಂದು ಅವರ ಬಂಧುಗಳ ಮನೆಯಲ್ಲಿ ರಸದೌತಣ ಪಡೆದು ಬೆಂಗಳೂರಿಗೆ ವಾಪಸ್. ೮ ದಿನಗಳ ಮೇಲೆ ಆಚಾರ್ಯರಿಗೆ ಊಟ!

ಸೀನಿಯರ್ ಎಂ. ಎ. ಗೆ ಬಂದಾಗ ಆಚಾರ್ಯರು ನಮಗೆ ಯಾವ ಐಚ್ಛಿಕ ವಿಷಯವನ್ನಾಯ್ದು ಕೊಳ್ಳಬೇಕೆಂದು ತಾವೇ ಹೇಳಿದರು. ಸಾಹಿತ್ಯದ ತಂಟೆಗೆ ಹೋಗಬೇಡಿ. ಶಾಸ್ತ್ರ ಓದಿ, ದರ್ಶನ ತೆಗೆದುಕೊಳ್ಳಿ ಎಂದು. ಹೀಗೆ ನಮಗೆ ಅಡಿಗಡಿಗೆ ಮಾರ್ಗದರ್ಶನ ಮಾಡಿದ ಗುರುಗಳು ತಾತಾಚಾರ್ಯರು.

ಆಗಲೇ ತಮ್ಮೂರಿನಲ್ಲಿ ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚ್ ತೆರೆಯುವ ಯೋಜನೆಯನ್ನು ಹಮ್ಮಿಕೊಂಡು ಅದಕ್ಕಾಗಿ ಪೂರ್ವಸಿದ್ಧತೆಗಳನ್ನು ನಡೆಸಿದ್ದರು. ವಿಶ್ವವಿದ್ಯಾಲಯದಲ್ಲಿ ಅವರ ವಿದ್ವತ್ತಿಗೆ ತಕ್ಕ ಸಮ್ಮಾನ ದೊರೆತಿರಲೇ ಇಲ್ಲ. ನಾವು ಓದು ಮುಗಿಸಿದ ೨ / ೩ ವರ್ಷಗಳಲ್ಲಿ ಅವರೂ ಯೂನಿವರ್ಸಿಟಿಗೆ ವಿದಾಯ ಹೇಳಿ ಮೇಲುಕೋಟೆಯಲ್ಲಿ ಈ ಸಂಸತ್ತನ್ನು ಅಣು ಅಣುವಾಗಿ ಕಟ್ಟಿದರು. ಸಾಮಾನ್ಯ ಸಾಧನೆಯಲ್ಲ ಅದು.

ನಾನು ಇನ್ನೂ ಬರೆಯುತ್ತಲೇ ಹೋಗಲು ಬೇಕಾದಷ್ಟು ಸಾಮಗ್ರಿ ಇದೆ. ಆದರೆ ವಿಸ್ತರಕ್ಕೆ ಹೆದರಿ ಒಂದು ವಿಷಯವನ್ನು ಮಾತ್ರ ಹೇಳಿ ಮುಗಿಸುತ್ತೇನೆ. ಅನೇಕ ವರ್ಷಗಳು ಕಳೆದು ೧೯೯೮ರಲ್ಲಿ ಅವರ ಸಂಸತ್ತಿನಲ್ಲಿ ಒಂದೆರಡು ತಿಂಗಳ ಕಾಲ ಕೆಲಸ ಮಾಡಿದ್ದೆ. ಆಗ ಅವರು ಹಮ್ಮಿಕೊಂಡ ಕಾರ್ಯದ ವಿಸ್ತಾರವೆಷ್ಟೆಂಬ ಅರಿವಾಯಿತು. ಆದರೆ ಪಿ.ಎಚ್.ಡಿ ಪ್ರಬಂಧ ಬರೆಯುತ್ತಿದ್ದ ಕಾರಣ ಈ ಕೆಲಸವನ್ನು ಮುಂದುವರೆಸಲು ಅಶಕ್ತಳಾಗಿದ್ದೆ. ಆ ಬಳಿಕ ಅವರೂ ಸಹ ಅಕಾಡೆಮಿಯನ್ನು ಕಾರಣಾಂತರಗಳಿಂದ ಬಿಟ್ಟು ಬಂದದ್ದು ನಿಜಕ್ಕೂ ವಿಷಾದಕರ.

ಅವರಂತಹ ಗುರುಗಳು न भूतो न भविष्यति।।

परमपदस्थानां भगवतो नित्यकैङ्कर्यरतानाम् अस्मदाचार्याणाम्

एतेषां चरणारविन्दयोः मम अनन्तानन्तप्रणामान् समर्प्य विरमामि ।