Skip to content

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ

ವಿಶಿಷ್ಟಾದ್ವೈತ ದರ್ಶನ

ಯಾರಿಗೆ ತಾನೇ ಸರ್ವಜ್ಞರಾಗಬೇಕೆಂಬ ಆಸೆಯಿರುವುದಿಲ್ಲ? ಮಂದಮತಿಗಳಾದವರನ್ನು ಅವರು ಜ್ಞಾನಿಗಳೆಂದು ಕೊಂಡಾಡಿದಾಗ, ಆಗುವ ಸಂತೋಷವೆಷ್ಟು! ತಿಳಿದೋ ತಿಳಿಯದೆಯೋ ಎಲ್ಲರಿಗೂ ಜ್ಞಾನಿಗಳಾಗಬೇಕೆಂಬ ತವಕ. ಹೀಗಿರುವಾಗ, ಸರ್ವಜ್ಞರೇ ಆದಾಗ ಆಗುವ ಆನಂದವೆಷ್ಟು! ಜ್ಞಾನಿಗಳಾಗಬೇಕೆಂದು ಬಯಸುವವರಿಗೆಲ್ಲಾ ಅದಕ್ಕೆ ಬೇಕಾದ ಪ್ರಯತ್ನವಿಲ್ಲ. ಆ ರೀತಿ, ಪರಿಪೂರ್ಣ ಜ್ಞಾನದಿಂದ ಸರ್ವಜ್ಞನಾಗಿರುವವರೆಂದರೆ, ಪರಮಾತ್ಮನು ಮಾತ್ರ. ಆದ್ದರಿಂದಲೇ ಉಪನಿಷತ್ತುಗಳು ಅವನನ್ನು ’ಯಃ ಸರ್ವಜ್ಞಃ ಸಃ ಸರ್ವವಿತ್’ ಎಂಬುದಾಗಿ ಕೊಂಡಾಡುತ್ತವೆ. ಇಲ್ಲಿ ಒಂದು ಸಂದೇಹ, ’ಸರ್ವಜ್ಞಃ’ ಎಂದರೂ ಎಲ್ಲವನ್ನೂ ತಿಳಿದವನೆಂದರ್ಥ. ’ಸರ್ವವಿತ್’ ಎಂದರೂ ಎಲ್ಲವನ್ನೂ ತಿಳಿದವನೆಂದರ್ಥ. ಈ ರೀತಿ, ಉಪನಿಷತ್ತಿನಲ್ಲಿ ಪರ್ಯಾಯ ಪದಗಳನ್ನು ’ಘಟಃ, ಕಲಶಃ’ ಎಂಬಂತೆ ಒಂದೇ ಕಡೆ ಬಳಸಿರುವ ಔಚಿತ್ಯವೇನೆಂದು ಪ್ರಶ್ನೆ ಏಳುತ್ತದೆ. ಇದಕ್ಕೆ ಶಾಸ್ತ್ರಕಾರರು ’ಸರ್ವಂ ಸರ್ವತಯಾ ವೇತ್ತಿ - ಎಲ್ಲವನ್ನೂ ಎಲ್ಲಾ ಎಂದು ತಿಳಿದಿದ್ದಾನೆ’ ಎಂದೂ, ’ಸರ್ವಂ ಪ್ರತ್ಯೇಕತಯಾ ವೇತ್ತಿ - ಎಲ್ಲವನ್ನೂ ಪ್ರತ್ಯೇಕಿಸಿ ಒಂದೊಂದಾಗಿಯೂ ತಿಳಿದಿದ್ದಾನೆ’ ಎಂದೂ ವಿವರಿಸಿ, ಪರಮಾತ್ಮನ ಸರ್ವಜ್ಞತ್ವವನ್ನು ಎರಡು ವಿಧವಾಗಿ ವಿವರಿಸಿದ್ದಾರೆ.

ಒಂದು ದೃಷ್ಟಿಯಲ್ಲಿ ನೋಡಿದಾಗ, ’ಸರ್ವಂ ಸರ್ವತಯಾ ವೇತ್ತಿ’ ಎಂಬ ಸರ್ವಜ್ಞತ್ವ ನಮ್ಮೆಲ್ಲರಿಗೂ ಉಂಟು. ಆದರೆ, ’ಸರ್ವಂ ಪ್ರತ್ಯೇಕತಯಾ ವೇತ್ತಿ’ ಎಂಬ ಸರ್ವಜ್ಞತ್ವ ಹುಲುಮಾನವರಾದ ನಮಗೆ ಸಾಧ್ಯವೇ ಇಲ್ಲ. ಆದರೆ, ಈ ಪ್ರಯತ್ನವನ್ನು ನಮ್ಮ ದಾರ್ಶನಿಕರು ಕೈಬಿಡಲಿಲ್ಲ. ಎರಡನೆಯ ಸರ್ವಜ್ಞತ್ವವನ್ನು ಪಡೆಯಲು ಅವರು ಮಧ್ಯಮ ಮಾರ್ಗವೊಂದನ್ನು ಅನುಸರಿಸಿದರು. ಪ್ರತ್ಯೇಕ ಪ್ರತ್ಯೇಕವಾದ ಎಲ್ಲಾ ಪದಾರ್ಥಗಳನ್ನೂ ಪದಾರ್ಥವಿಭಾಗ ಮಾಡಿ, ತಿಳಿಯುವುದರ ಮೂಲಕ ಸರ್ವವಿತ್ತುಗಳಾದರು.

ಶಂಕರಭಗವತ್ಪಾದರ ದೃಷ್ಟಿಯಲ್ಲಿ, ಸರ್ವವೂ ಬ್ರಹ್ಮಮಯ. ನಿತ್ಯ-ಶುದ್ಧ-ಬುದ್ಧ-ಮುಕ್ತ-ಚೈತನ್ಯವೊಂದೇ ಸತ್ಯ. ಮತ್ತೆಲ್ಲವೂ ಮಿಥ್ಯೆ. ಆದ್ದರಿಂದ, ಚೈತನ್ಯವನ್ನುಳಿದು ಮತ್ತೆ ಯಾವ ಪದಾರ್ಥವೂ ಇಲ್ಲ. ಆ ನಿತ್ಯ-ಶುದ್ಧ-ಬುದ್ಧ-ಮುಕ್ತ-ಚೈತನ್ಯದ ಸಾಕ್ಷಾತ್ಕಾರ ಸರ್ವವಿತ್ವಕ್ಕೆ ಹಾದಿ ಎಂದು ಅವರು ಸಾರಿದರು. ಮಧ್ವಾಚಾರ್ಯರು ವಿಶ್ವದಲ್ಲಿರುವ ಪದಾರ್ಥಗಳನ್ನು ಎರಡಾಗಿ ವಿಭಾಗಿಸಿ, ಈ ತತ್ತ್ವಗಳನ್ನು ಸ್ಪಷ್ಟವಾಗಿ ಅರಿಯುವುದರ ಮೂಲಕ ಜಗತ್ತನ್ನೇ ಅರಿತು ಸರ್ವಜ್ಞತ್ವವನ್ನು ಸಂಪಾದಿಸಬಹುದೆಂದು ತೋರಿಸಿಕೊಟ್ಟರು. ಅವರ ಪ್ರಕಾರ, ಈ ಪ್ರಪಂಚದಲ್ಲಿರುವ ತತ್ವಗಳು ಎರಡೇ. ಒಂದು, ಸ್ವತಂತ್ರ - ಅದೇ ಪರಮಾತ್ಮತತ್ವ. ಮತ್ತೊಂದು, ಅಸ್ವತಂತ್ರತತ್ವ - ಅದಾದರೋ ಅಚೇತನ ಪದಾರ್ಥಗಳು ಮತ್ತು ಚೇತನಪದಾರ್ಥಗಳು. ಇವೆಲ್ಲವೂ ಭಗವಂತನಿಗೆ ಅಡಿಯಾಳಾದವುಗಳೇ; ಆದ್ದರಿಂದ ಅಸ್ವತಂತ್ರತತ್ವಗಳು. ಇವುಗಳ ಅರಿವೇ ಸರ್ವಜ್ಞತ್ವಕ್ಕೆ ದಾರಿ.

ಛಾಂದೋಗ್ಯೋಪನಿಷತ್ತು, ’ಏಕವಿಜ್ಞಾನೇನ ಸರ್ವವಿಜ್ಞಾನ’ವು ಸಾಧ್ಯ ಎನ್ನುತ್ತದೆ. ನಮ್ಮ ಮತತ್ರಯಾಚಾರ್ಯರೂ ಈ ದಿಸೆಯಲ್ಲೇ ಕಾರ್ಯೋನ್ಮುಖರಾಗಿ, ಕಂಡುಕೊಂಡ ನಿತ್ಯಸತ್ಯ ವಿಶ್ವದ(ಜಗತ್ತಿನ) ವಿಜ್ಞಾನವೇ ಸರ್ವವಿಜ್ಞಾನ, ಅಂದರೆ ಎಲ್ಲಾ ವಸ್ತುಗಳ ನಿಜವಾದ ವಿಶೇಷಜ್ಞಾನವೆಂದು ತಿಳಿಸಿದವರು.

ಪ್ರಾಚೀನ ದಾರ್ಶನಿಕರ ದೃಷ್ಟಿಯನ್ನೇ ಆಧಾರವಾಗಿಟ್ಟುಕೊಂಡು, ರಾಮಾನುಜರು ಪ್ರತಿಪಾದಿಸಿದ ದರ್ಶನವೇ ’ವಿಶಿಷ್ಟಾದ್ವೈತದರ್ಶನ’. ಶಂಕರ ಮತ್ತು ಮಧ್ವರ ದರ್ಶನಗಳೆರಡರ ಸಮನ್ವಯವೋ ಎಂಬಂತೆ ತೋರುವ ದರ್ಶನವಿದು. ಕಾರಣ, ಇವರು ಈ ವಿಶ್ವವೆಲ್ಲವೂ ಒಂದೇ ತತ್ವವೆಂದೂ ಪ್ರತಿಪಾದಿಸಿದ್ದಾರೆ. ಹಾಗೆಯೇ, ಚೇತನಾಚೇತನಗಳ ಸಮೂಹವೇ ಜಗತ್ತು, ಅದರಲ್ಲಿ ಪರಮಾತ್ಮನೆಂಬ ಸ್ವತಂತ್ರ ಚೇತನಕ್ಕೆ ಜೀವಾತ್ಮರೆಂಬ ಚೇತನಗಳೂ, ಅಚೇತನಪದಾರ್ಥಗಳೂ ಅಡಿಯಾಳಾಗಿವೆ. ಈ ಮೂರರ ಸ್ವರೂಪ-ಸ್ವಭಾವಗಳನ್ನು ಯಥಾವತ್ತಾಗಿ ಅರಿತಾಗ, ನಾವೂ ನಿಜವಾಗಿಯೂ ಸರ್ವಜ್ಞರಾಗುತ್ತೇವೆ. ಶಂಕರರ ಸಿದ್ಧಾಂತಕ್ಕೆ ಅನುಗುಣವಾದ ತತ್ವಾದ್ವೈತವನ್ನೂ ರಾಮಾನುಜರು ಬಿಡಲಿಲ್ಲ. ಕಾರಣ, ಈ ಮೂರು ತತ್ವಗಳೂ ಒಂದನ್ನೊಂದು ಬಿಡದಂತೆ ಹೆಣೆದುಕೊಂಡಿವೆ. ಅಂದರೆ, ಇದು ವಿಶೇಷಗಳಿಂದ ಕೂಡಿದ ಅದ್ವೈತತತ್ವ. ಅದೇ ವಿಶಿಷ್ಟಾದ್ವೈತವೆಂದು ಪ್ರತಿಪಾದಿಸಿದರು.

ಅದೇ ರೀತಿಯಲ್ಲಿ, ಪರಮಾತ್ಮತತ್ವವನ್ನೂ, ಅಸ್ವತಂತ್ರತತ್ವಗಳಾದ ಚೇತನಾಚೇತನಗಳನ್ನೂ ಪ್ರತ್ಯೇಕವಾಗಿ ತಿಳಿದಾಗ, ತತ್ವಗಳ ವಿಭಿನ್ನತೆ ಎದ್ದು ಕಾಣುತ್ತದೆ. ಆ ದೃಷ್ಟಿಯಿಂದ, ರಾಮಾನುಜರು, ಭೇದವನ್ನೂ, ಅಭೇದವನ್ನೂ, ಭೇದಾಭೇದವನ್ನೂ, ಉಪನಿಷತ್ತುಗಳು ಪ್ರತಿಪಾದಿಸಿರುವುದಾಗಿ ತಮ್ಮ ವೇದಾರ್ಥಸಂಗ್ರಹದಲ್ಲಿ ಪ್ರತಿಪಾದಿಸಿದ್ದಾರೆ. ತತ್ವಗಳ ವಿಮರ್ಶೆ ಮಾಡಿದಾಗ, ಅವರು ಹೇಳುವ ಮಾತುಗಳು ಇವು - ’ಕಿಮತ್ರ ತತ್ವಂ? ಭೇದೋ ವಾ? ಅಭೇದೋ ವಾ? ದ್ವ್ಯಾತ್ಮಕತಾ ವಾ? ಸರ್ವಸ್ಯ ವೇದವೇದ್ಯತ್ವಾತ್ ಸರ್ವಂ ಸಮರ್ಥಿತಂ ಭವತಿ’.

ಈ ರೀತಿ, ಎಲ್ಲ ದರ್ಶನಗಳ ಸಾಮಂಜಸ್ಯವನ್ನು ಪ್ರತಿಪಾದಿಸಿದ, ಶ್ರೀ ರಾಮಾನುಜರನ್ನು ’ಸಮನ್ವಯಾಚಾರ್ಯ’ರು ಎಂದು ಕರೆದರೂ ತಪ್ಪಿಲ್ಲ. ಆದ್ದರಿಂದ, ತಮ್ಮ ಮೇರುಕೃತಿ ಶ್ರೀಭಾಷ್ಯದ ಕೊನೆಯ ವಾಕ್ಯವನ್ನು ಇವರು, ’ಇತಿ ಸರ್ವಂ ಸಮಂಜಸಮ್’ ಎಂದು ಮುಗಿಸಿದ್ದಾರೆ. ಏಕತೆಯಲ್ಲಿ ಅನೇಕತೆಯನ್ನೂ, ಅನೇಕತೆಯಲ್ಲಿ ಏಕತೆಯನ್ನೂ ಪ್ರತಿಪಾದಿಸುವ ಈ ವಿಶಿಷ್ಟಾದ್ವೈತದರ್ಶನ, ನಮ್ಮ ಪ್ರಾಪಂಚಿಕವಾದ ಸಮಸ್ಯೆಗಳಿಗೂ ಅಧ್ಯಾತ್ಮಪ್ರವೃತ್ತಿಗೂ ದಾರಿದೀಪವಾಗಿದೆ.

ಪ್ರಾಯೋಗಿಕವಾಗಿ ಈ ದರ್ಶನವನ್ನು ಸ್ವಲ್ಪ ತಿಳಿಯಲು ಪ್ರಯತ್ನಿಸೋಣ. ಒಂದು ಮಾವಿನ ಹಣ್ಣನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ, ಅದರಲ್ಲಿರುವ ಅನೇಕ ಪದಾರ್ಥಗಳ ಅರಿವಾಗದಿರದು. ಅದರಲ್ಲಿರುವ ತಿರುಳು, ಓಟೆ, ಸಿಪ್ಪೆ, ರಸ, ಇವುಗಳಲ್ಲದೇ ವಾಸನೆ, ರುಚಿ, ಬಣ್ಣ ಇತ್ಯಾದಿ ಅನೇಕ ಪದಾರ್ಥಗಳು ನಮಗೆ ಕಾಣಸಿಗುತ್ತವೆ. ಆದರೆ, ಇದೆಲ್ಲದರ ಸಮ್ಮೇಳನವನ್ನು ನಾವು ಮಾವಿನಹಣ್ಣು ಎಂಬ ಒಂದೇ ಪದಾರ್ಥವನ್ನಾಗಿಯೇ ಭಾವಿಸುತ್ತೇವೆಯೇ ಹೊರತು, ಅನೇಕ ಪದಾರ್ಥಗಳೆಂದು ಭಾವಿಸುವುದಿಲ್ಲ. ಹಾಗಿದ್ದರೆ, ’ಮಾವಿನಹಣ್ಣುಗಳು’ ಎಂಬ ಬಹುವಚನ ಪ್ರಯೋಗವಾಗಿರಬೇಕಿತ್ತು. ಈ ರೀತಿಯಲ್ಲಿ ನಾವು ನೋಡುವ ಪ್ರತಿಯೊಂದು ಪದಾರ್ಥವು ಅನೇಕ ವಿಶೇಷಗಳಿಂದ ಕೂಡಿ, ಒಂದಾಗಿಯೇ ತೋರುತ್ತದೆ. ಇದೇ ಅನೇಕತೆಯಲ್ಲಿ ಏಕತೆ ಮತ್ತು ಏಕತೆಯಲ್ಲಿ ಅನೇಕತೆ. ಇದರ ಮರ್ಮವನ್ನು ಅರಿತವನು ಮಾತ್ರ ನಿಜವಾದ ದಾರ್ಶನಿಕ.

ಇದರಂತೆಯೇ, ಈ ವಿಶ್ವವೆಲ್ಲವೂ ಪರಮಾತ್ಮನ, ಚೇತನ-ಅಚೇತನಗಳ ಸಮ್ಮಿಲನದಿಂದಲೇ ಉಂಟಾಗಿರುವುದು. ಇವುಗಳ ಒಟ್ಟಾಗಿರುವಿಕೆಯನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಒಟ್ಟಾಗಿ ತಿಳಿದಾಗ ಒಂದೇ ತತ್ವ. ಅದೇ ಸವಿಶೇಷಾದ್ವೈತತತ್ವ. ಬೌದ್ಧಿಕವಾಗಿ ಇದರಲ್ಲಿ ಮಿಳಿತವಾಗಿರುವ ತತ್ವಗಳನ್ನು ವಿವೇಚಿಸಿದಾಗ, ತತ್ವತ್ರಯ. ಈ ತತ್ವತ್ರಯದಲ್ಲಿ ಜೀವಾತ್ಮತತ್ವವನ್ನೂ, ಅಚೇತನತತ್ವಗಳನ್ನೂ ಮಧ್ವಾಚಾರ್ಯರು ಅಸ್ವತಂತ್ರತತ್ವವೆಂದು ಕರೆದರು. ಪರಮಾತ್ಮತತ್ವವನ್ನು ಸ್ವತಂತ್ರತತ್ವವೆಂದೂ ಕರೆದು, ಒಟ್ಟು ಎರಡು ತತ್ವಗಳಿವೆ, ಆದ್ದರಿಂದ ದ್ವೈತ ವೇದಾಂತಗಳಲ್ಲಿ ಪ್ರತಿಪಾದಿತವಾಗುತ್ತದೆ ಎಂದರು.

ರಾಮಾನುಜರು ದ್ವೈತಾದ್ವೈತಗಳ ಸಮನ್ವಯಕ್ಕೆ ಆರಿಸಿಕೊಂಡ ದಾರಿ, ಉಪನಿಷತ್ತುಗಳಲ್ಲೇ ಪ್ರತಿಪಾದಿತವಾದ ದಾರಿ. ’ಯಸ್ಯ ಪೃಥಿವೀ ಶರೀರಂ, ಯಸ್ಯ ಆತ್ಮಾ ಶರೀರಂ’, ಎಂಬ ಉಪನಿಷತ್ತಿನ ವಾಕ್ಯಗಳು, ದ್ವೈತಾದ್ವೈತಸಮನ್ವಯಕ್ಕೆ ದಾರಿದೀಪವಾದುವು. ಈ ವಾಕ್ಯಗಳಲ್ಲಿ, ’ಶರೀರ’ಶಬ್ದ ವಿಶ್ವದ ಜ್ಞಾನಕ್ಕೆ ಹೊಸ ಮಾರ್ಗವನ್ನು ತೆರೆಯಿತು. ನಾವೆಲ್ಲರೂ ’ಶರೀರ’ ಎಂದರೆ ಏನೆಂದು ಬಲ್ಲೆವು. ಶರೀರ ಎಂದ ಒಡನೆ, ನಮಗೆ ನೆನಪಾಗುವುದು ನಮ್ಮ ಶರೀರ. ಇದನ್ನು ಸ್ವಲ್ಪ ವಿಶ್ಲೇಷಿಸಿ ನೋಡೋಣ. ಮೂಳೆ, ಮಾಂಸ ಮೊದಲಾದ ಏಳು ಪದಾರ್ಥಗಳಿಂದಾಗಿರುವುದು, ಈ ಶರೀರ. ಈ ಶರೀರದಲ್ಲಿ ಚೈತನ್ಯದ ಸಂಚಾರವಿರುವ ತನಕ ಇದು ಜೀವಂತವಾಗಿದೆ ಎನ್ನುತ್ತೇವೆ. ಅದರ ವಿಯೋಗವಾದ ನಂತರ ಇದನ್ನು ’ಹೆಣ’ ಎನ್ನುತ್ತೇವೆ. ಅದರಂತೆಯೇ, ವೇದ ಮೊದಲಾದ ಪ್ರಮಾಣಗಳಿಂದ ನಮಗೆ ತಿಳಿಯುವ ಮತ್ತೊಂದು ವಿಷಯ, ಈ ಪರಮಾತ್ಮ ಎಲ್ಲೆಲ್ಲೂ ಅಂತರ್ಯಾಮಿಯಾಗಿ ವ್ಯಾಪಿಸಿದ್ದಾನೆ, ಎಂಬುದು. ಅದನ್ನೇ ಈಶಾವಾಸ್ಯೋಪನಿಷತ್ತೂ, ’ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್’ ಎಂದು ಸಾರಿ ಹೇಳುತ್ತದೆ. ಈ ಮರ್ಮವನ್ನರಿತ ರಾಮಾನುಜರು, ಚೇತನಾಚೇತನಾತ್ಮಕವಾದ ಈ ಪ್ರಪಂಚ ಸರ್ವೇಶ್ವರನಾದ ಪರಮಾತ್ಮನ ಶರೀರ. ಅವನೇ ಈ ಶರೀರದ ನಿಯಾಮಕ, ಧಾರಕ ಮತ್ತು ಸ್ವಾಮಿ ಎಂದು ಪ್ರತಿಪಾದಿಸಿದರು.

ಅವನು, ಈ ಶರೀರದಲ್ಲೇ ವಾಸಿಸುತ್ತಿದ್ದರೂ, ಅವನಿಗೆ ಈ ಶರೀರದ ಸುಖದುಃಖಗಳು ತಟ್ಟದು. ಕಾರಣ, ಅವನು ಈ ಶರೀರದಲ್ಲಿ ವಾಸಿಸುತ್ತಿರುವುದು, ಕರ್ಮಸಂಬಂಧದಿಂದಲ್ಲ, ತನ್ನ ಸಂಕಲ್ಪದಿಂದ. ನಾವಾದರೋ ಈ ಶರೀರದಲ್ಲಿ ವಾಸಿಸುತ್ತಿರುವುದು, ಕರ್ಮಸಂಬಂಧದಿಂದ. ಆದ್ದರಿಂದ, ಆ ಕರ್ಮಗಳಿಗೆ ಅನುಗುಣವಾದ ಸುಖದುಃಖಗಳಿಂದ ದೂರವಿರಲು ಸಾಧ್ಯವಿಲ್ಲ.

ನಿಜವಾಗಿಯೂ ನೋಡಿದಾಗ, ಬ್ರಹ್ಮಾಂಡ-ಪಿಂಡಾಂಡಗಳಿಗೆ ಯಾವ ವಿಧವಾದ ವ್ಯತ್ಯಾಸವೂ ಇಲ್ಲ. ಗೋಪಾಲನೆಂಬ ವ್ಯಕ್ತಿಯೊಬ್ಬನನ್ನು ವಿಶ್ಲೇಷಿಸಿದಾಗ, ಅನವ ಶರೀರ, ಅವನ ಆತ್ಮ, ಅನವಲ್ಲಿರುವ ಪರಮಾತ್ಮ - ಈ ಮೂರರ ಅರಿವಾಗುತ್ತದೆ. ಆದರೆ, ಗೋಪಾಲನ ಶರೀರದಲ್ಲೇ ಅಸಂಖ್ಯವಾದ ಜೀವಕಣಗಳಿವೆ. ಈ ಜೀವಕಣಗಳೊಂದೊಂದಕ್ಕೂ ಆಧಾರವಾಗಿರುವ ಒಂದು ದ್ರವ್ಯ. (ಅದನ್ನೇ ಶರೀರ ಎಂದು ಕರೆಯಬಹುದು) ಅದರಲ್ಲಿರುವ ಜೀವಾತ್ಮ, ಅದರಲ್ಲಿ ಅಂತರ್ಯಾಮಿಯಾಗಿರುವ ಪರಮಾತ್ಮ ಎಂದು ವಿಶ್ಲೇಷಿಸಬಹುದು. ಈ ರೀತಿ ನೋಡಿದಾಗ, ಒಬ್ಬ ಸಾಮಾನ್ಯ ವ್ಯಕ್ತಿಯೇ ಒಂದು ವಿಶ್ವವಾಗಿ ತೋರುತ್ತಾನೆ.

ಆದರೆ, ಒಂದು ವಿಸ್ಮಯಕಾರಿ ಸಂಗತಿಯೆಂದರೆ, ಗೋಪಾಲನಲ್ಲಿ ಪ್ರತಿಯೊಂದು ಜೀವಕಣಗಳೂ ಗೋಪಾಲನೆಂಬ ವಿಶಿಷ್ಟವ್ಯಕ್ತಿಯ ವ್ಯವಸ್ಥೆಗೆ (System) ಅನುಗುಣವಾಗಿಯೇ ಕೆಲಸ ಮಾಡುವ ಉಪವ್ಯವಸ್ಥೆಗಳೇ (Sub-systems) ಆಗಿವೆ. ಇವುಗಳಲ್ಲಿ ಏರುಪೇರಾದಾಗ ಮೂಲವ್ಯವಸ್ಥೆಯಲ್ಲೂ ಏರುಪೇರಾಗಬಹುದು. ಆದ್ದರಿಂದ, ಪ್ರತಿಯೊಂದು ಉಪವ್ಯವಸ್ಥೆಯೂ ತನ್ನ ತನ್ನ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರ ಮೂಲವ್ಯವಸ್ಥೆ (Main System) ಸರಿಯಾಗಿ ಕೆಲಸ ಮಾಡಬಲ್ಲುದು. ಇದೇ ರಾಮಾನುಜರು ಅರಿತ ಉಪನಿಷದ್ರಹಸ್ಯ. ಪರಮಾತ್ಮಾಧಿಷ್ಠಿತವಾದ ಚೇತನಾಚೇತನದ ಸಮ್ಮಿಳನವಾದ ಬ್ರಹ್ಮಾಂಡವನ್ನು ಮೂಲವ್ಯವಸ್ಥೆಯೆಂದು (Main System) ಭಾವಿಸಿದರೆ, ಅದರಲ್ಲಿರುವ ಅಸಂಖ್ಯಾತ ಪಿಂಡಾಂಡಗಳೇ ಉಪವ್ಯವಸ್ಥೆಗಳಾಗುತ್ತವೆ. ಈ ಉಪವ್ಯವಸ್ಥೆಗಳು(Sub-systems) ಸರಿಯಾಗಿ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರ ನಮ್ಮ ವಿಶ್ವ ಅಥವಾ ಬ್ರಹ್ಮಾಂಡ ಸುಸ್ಥಿತಿಯಲ್ಲಿರಬಹುದು. ಪಿಂಡಾಂಡಗಳು ಅಥವಾ ಉಪವ್ಯವಸ್ಥೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸದೆ, ಚೆಲ್ಲಾಪಿಲ್ಲಿಯಾದಾಗ ಮೂಲವ್ಯವಸ್ಥೆಗೆ ಧಕ್ಕೆ ಏರ್ಪಡುತ್ತದೆ. ಉಪವ್ಯವಸ್ಥೆಗಳ ಚೆಲ್ಲಾಟ ಸಹನಾತ್ಮಕ (Tolerance level) ಸ್ಥಿತಿಯನ್ನು ಮೀರಿದಾಗ, ವಿಶ್ವದ ವ್ಯವಸ್ಥೆಯೇ ಏರುಪೇರಾದಾಗ, ನಾಶವಾಗುವ ಪರಿಸ್ಥಿತಿಯನ್ನು ತಲುಪಬಹುದು. ಇದೇ ಪ್ರಳಯ.

ಈ ರೀತಿ, ತತ್ವಸಾಕ್ಷಾತ್ಕಾರ ಮಾಡಿಕೊಂಡ ರಾಮಾನುಜರು, ವಿಶ್ವದ ಹೊಸ ವ್ಯಾಖ್ಯೆಯನ್ನೇ ರಚಿಸಿದ್ದಾರೆ. ಅವರ ಈ ವ್ಯಾಖ್ಯೆ, ಈಗಿನ ವಿಜ್ಞಾನದ ಸಮಗ್ರದೃಷ್ಟಿಗೂ (Holistic approach) ಇಂಪು ನೀಡುತ್ತದೆ.

ಚೇತನಾಚೇತನಾತ್ಮಕವಾದ ಈ ಪ್ರಪಂಚ, ಪರಮಾತ್ಮನ ಶರೀರವಾಗಿದೆ ಎಂಬ ಉಪನಿಷದ್ರಹಸ್ಯ, ದ್ವೈತಾದ್ವೈತದರ್ಶನಗಳ ಸಮನ್ವಯವನ್ನು ಸಾಧಿಸಬಲ್ಲುದು. ಇದೇ ಶ್ರೀ ರಾಮಾನುಜರ ಸವಿಶೇಷಾದ್ವೈತದರ್ಶನ ಅಥವಾ ವಿಶಿಷ್ಟಾದ್ವೈತದರ್ಶನ.

-ಪ್ರೊ. ಎಂ.ಎ. ಲಕ್ಷ್ಮೀತಾತಾಚಾರ್ಯ
ಸಂಸ್ಥಾಪಕ ಅಧ್ಯಕ್ಷರು,
ಸಂಸ್ಕೃತಿ ಪ್ರತಿಷ್ಠಾನ,
ಮೈಸೂರು.